ನೆಲಮಂಗಲ, ಚಿಕ್ಕಮಗಳೂರು: ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ತಾಲೂಕು ಕಚೇರಿಯ ಮುಂದೆ ಮಾಜಿ ಸಚಿವ ಅಂಜನ ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಇನ್ನೊಂದೆಡೆ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಂಜನಮೂರ್ತಿ, ರಾಜ್ಯದಲ್ಲಿ ಚುನಾವಣೆ ಅಂದರೆ, ನಮ್ಮ ನಾಯಕರ ಮೇಲೆ ಈ ರೀತಿ ದಾಳಿಗಳು ಸರ್ವೇ ಸಾಮಾನ್ಯ. ಬಿಜೆಪಿ ಪಕ್ಷ ನೇರ ರಾಜಕಾರಣ ನಡೆಸದೆ, ಈ ರೀತಿ ಕುತಂತ್ರದ ರಾಜಕಾರಣ ನಡೆಸುತ್ತಿದೆ.
ಆದರೆ, ನಮ್ಮ ನಾಯಕ ಈ ಗೊಡ್ಡು ಬೆದರಿಕೆಗೆ ಜಗ್ಗಲ್ಲ. ಮುಂಬರುವ ಉಪ ಚುನಾವಣೆಯಲ್ಲಿ ನಮ್ಮ ನಾಯಕರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಸಲುವಾಗಿ ನಡೆದಿರುವ ಈ ದಾಳಿ ರಾಜಕೀಯ ಪ್ರೇರಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಐ ದಾಳಿ ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಆಜಾದ್ ಪಾರ್ಕ್ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಸಿಬಿಐ ದಾಳಿ ಖಂಡಿಸಿದರು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಂತರ ಕೆಲ ಕಾಲ ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.