ಬೆಂಗಳೂರು: ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ವಿಚಾರವಾಗಿ ಬಸವರಾಜ ಹೊರಟ್ಟಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಬಸವರಾಜ ಹೊರಟ್ಟಿ ವಿರುದ್ಧದ ವಿಚಾರಣೆಗೆ ಸೀಮಿತವಾಗಿ ಮಧ್ಯಂತರ ತಡೆ ನೀಡಿ, ಉಳಿದವರ ವಿರುದ್ಧ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಆದೇಶಿಸಿತು.
ಅಲ್ಲದೇ ಅರ್ಜಿಗೆ ಸಂಬಂಧಿಸಿದಂತೆ ದೂರುದಾರರಿಗೆ ತುರ್ತು ನೋಟಿಸ್ ಜಾರಿಗೊಳಿಸಿದ ಪೀಠ, ರಾಜ್ಯ ಸರ್ಕಾರ ಸೇರಿದಂತೆ ಉಳಿದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.
ಘಟನೆ ನಡೆದ ಸ್ಥಳದಲ್ಲಿ ಅರ್ಜಿದಾರರು ಇರಲಿಲ್ಲ. ಎಫ್ಐಆರ್‌ನಲ್ಲೂ ಅವರ ವಿರುದ್ಧ ಗಂಭೀರ ವಿಚಾರಗಳು ಇಲ್ಲ. ಮುಖ್ಯವಾಗಿ, ಅರ್ಜಿದಾರರು ವಿಧಾನ ಪರಿಷತ್ ಸಭಾಪತಿಯಾಗಿದ್ದು, ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ನ್ಯಾಯಾಲಯ ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಈ ಹಂತದಲ್ಲಿ ತಡೆ ನೀಡಬಹುದು ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ವಿಚಾರಣೆಗೆ ಸೀಮಿತವಾಗಿ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ಪೀಠ ಹೇಳಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ