ಬೆಂಗಳೂರು: ನಗರದಲ್ಲಿ ನಿನ್ನೆ ತಡರಾತ್ರಿ ಕಾರು ಅಪಘಾತ ನಡೆದಿದೆ. ಜವೇರ್ ಎನ್ನುವ ವ್ಯಕ್ತಿ ಕಾರ್ನಲ್ಲಿ ಶನಿವಾರ ರಾತ್ರಿ ದೊಮ್ಮಲೂರು ರಸ್ತೆಯಲ್ಲಿ ಡಿವೈಡರ್ಗೆ ಗುದ್ದಿ ಮತ್ತೊಂದು ಕಾರ್ಗೆ ಡಿಕ್ಕಿ ಹೊಡೆದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಸದ್ಯ ಆತನನ್ನು ಮತ್ತು ಕಾರನ್ನು ವಶಪಡಿಸಿಕೊಂಡಿರುವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈದ್ಯಕೀಯ ಪರೀಕ್ಷೆಯಲ್ಲಿ ಉದ್ಯಮಿ ಮಗ ಡ್ರಿಂಕ್ & ಡ್ರೈವ್ ಮಾಡಿರುವುದು ದೃಢಪಟ್ಟಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರೇಸಿಂಗ್ ಶೋಕಿ:
ಕಾರು ಅಪಘಾತ ಪ್ರಕರಣದ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಕಾರು ರೇಸಿಂಗ್ ಬಗ್ಗೆ ಸಖತ್ ಕ್ರೇಜ್ ಹೊಂದಿದ್ದ ಜವೇರ್ ಆಗಾಗ್ಗೆ ಐಷಾರಾಮಿ ಕಾರುಗಳಲ್ಲಿ ಜಾಲಿ ಡ್ರೈವ್ ಹೋಗುತ್ತಿದ್ದ. ಫ್ರೆಂಡ್ಸ್ ಜೊತೆ ಮೋಜು-ಮಸ್ತಿ ಮಾಡಿಕೊಂಡು ಜಾಲಿ ಡ್ರೈವ್ ಮಾಡುವುದೇ ಈತನ ಹವ್ಯಾಸವಾಗಿತ್ತು ಎಂದು ತಿಳಿಸಿದ್ದಾರೆ.
ಪತ್ನಿ ಜೊತೆಗೆ ಜಾಲಿ ಡ್ರೈವ್:
ವಿಭಿನ್ನ ಕಾರುಗಳಲ್ಲಿ ಜಾಲಿ ಡ್ರೈವಿಂಗ್ ಹೋಗೋದು ಈತನ ಖಯಾಲಿ. ಹಲವು ಕಾರ್ ರೇಸ್ ಶೋಗಳಲ್ಲಿ ಭಾಗಿಯಾಗಿರುವ ಈತ, ಅದೇ ರೀತಿಯಲ್ಲೇ ನಿನ್ನೆ ಪೋರ್ಷ್ ಕಾರಿನಲ್ಲಿ ಹೆಂಡತಿ ಜೊತೆ ಜಾಲಿ ಡ್ರೈವ್ ಬಂದಿದ್ದ. ಇತರೆ ಕಾರ್ಗಳಲ್ಲಿ ಆತನ ಸ್ನೇಹಿತರಿದ್ದರು. ಇಂದಿರಾನಗರದ ಪಬ್ವೊಂದರಲ್ಲಿ ಮೋಜು ಮಸ್ತಿ ಮಾಡಿ ಹೊರ ಬಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
100 ರಿಂದ 120 ಕಿ.ಮೀ. ಸ್ಪೀಡ್:
ಪತ್ನಿ ಜೊತೆ ಬಂದು, ಕಾರನ್ನು 100 ರಿಂದ 120 ಕಿ.ಮೀ ಸ್ಪೀಡ್ನಲ್ಲಿ ಚಲಾಯಿಸಿದ್ದ ಎನ್ನಲಾಗ್ತಿದೆ. ಈ ವೇಳೆ ದೊಮ್ಮಲೂರು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಸುಮಾರು 100 ಮೀಟರ್ ಡಿವೈಡರ್ಗೆ ಸ್ಕ್ರ್ಯಾಚ್ ಮಾಡಿದ್ದಾನೆ. ಈ ವೇಳೆ ಮುಂದೆ ಹೋಗ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಹಲಸೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜವೇರ್ನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಕಾಫಿ ಎಸ್ಟೇಟ್ನಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳು ಪ್ರತ್ಯಕ್ಷ!
ಮೂವರಿಗೆ ಗಾಯ:
ಪ್ರಕರಣದಲ್ಲಿ ಕ್ಯಾಬ್ನಲ್ಲಿದ್ದ ಮೂವರಿಗೆ ಗಾಯಗಳಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸ್ಥಳದಲ್ಲಿ ಕುಡಿದ ಅಮಲಿನಲ್ಲಿ ಪೊಲೀಸರ ಮುಂದೆಯೇ ದುರ್ವರ್ತನೆ ತೋರಿದ್ದಾರೆ ಎನ್ನಲಾಗ್ತಿದೆ.
ಸಾಲು-ಸಾಲು ಅಫಘಾತ:
ತಡ ರಾತ್ರಿ ಸಾವು ನೋವಿನ ಪ್ರಕರಣಗಳು ನಗರದಲ್ಲಿ ನೆಡೆಯುತ್ತಿದ್ದರೂ ಯುವ ಜನತೆ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಕಂಠ ಪೂರ್ತಿ ಕುಡಿದು ಜಾಲಿ ರೈಡ್ ನೆಡೆಸುವುದು ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದೂವರೆ ಕೋಟಿ ರೂ. ಬೆಲೆಯ ಐಷಾರಾಮಿ ಕಾರಿನಲ್ಲಿ ಜಾಲಿ ಡ್ರೈವ್ಗೆ ಬಂದಿದ್ದಾರೆ. ಕ್ಯಾಬ್ಗೆ ಡಿಕ್ಕಿ ಹೊಡೆದ ಐಷಾರಾಮಿ ಕಾರಿನಲ್ಲಿ, ಪಾರ್ಟಿ ಮುಗಿಸಿ ತಡ ರಾತ್ರಿ ಹನ್ನೆರಡೂವರೆ ಸಮಯದಲ್ಲಿ ಶ್ರೀಮಂತರ ಮಕ್ಕಳು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಉದ್ಯಮಿ ಕರೀಮ್ ಮೆವಾನಿ ಮಗ ಸೊಸೆ:
ಉದ್ಯಮಿ ಕರೀಮ್ ಮೆವಾನಿ ಮಗನಾಗಿರುವ ಜವೇರ್ ಮತ್ತು ಸೊಸೆ ಶ್ರೇಯಾ, ಇಂದಿರಾನಗರದಲ್ಲಿ ಗೆಳೆಯರ ಜೊತೆಗೆ ಪಾರ್ಟಿ ಮಾಡಿದ್ದರು. ಎಲ್ಲರೂ ಪಾರ್ಟಿ ಬಳಿಕ ಮೂರು ಐಷಾರಾಮಿ ಆಡಿ, ಬೆನ್ಜ್ ಹಾಗು ಫೋರ್ಷ್ ಕಾರುಗಳಲ್ಲಿ ಜಾಲಿ ಡ್ರೈವ್ ಹೊರಟಿದ್ದರು ಎಂದು ಹೇಳಲಾಗ್ತಿದೆ.
ಹಿಂಬದಿಯಿಂದ ಡಿಕ್ಕಿ:
ತುಂತುರು ಮಳೆಯ ನಡುವೆಯೇ ಜಾಲಿ ಡ್ರೈವ್ ಮಾಡುತ್ತಿದ್ದ ಟೀಂ ಹಲಸೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಮಾಂಡೊ ಅಸ್ಪತ್ರೆ ಮುಂಭಾಗದ ಎ.ಎಸ್.ಸಿ ಕಾಲೇಜು ಗೇಟ್ ಮುಂದೆ ಅಪಘಾತವೆಸಗಿದ್ದಾರೆ. ಕೇಶವಮೂರ್ತಿ ಎಂಬುವರ ಕ್ಯಾಬ್ಗೆ ಜವೇರ್ ಮೆವಾನಿ ಡ್ರೈವ್ ಮಾಡುತ್ತಿದ್ದ ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಕಾಬ್ನಲ್ಲಿ ಮೂರು ಜನರು ಇದ್ದರು ಎಂದು ತಿಳಿದುಬಂದಿದೆ.
ಕ್ಯಾಬ್ ಸಂಪೂರ್ಣ ಜಖಂ:
ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಬ್ ಸಂಪೂರ್ಣ ಜಖಂ ಆಗಿದೆ. ಅಪಘಾತದಲ್ಲಿ, ಚಲಿಸುತ್ತಿದ್ದ ಮಾರ್ಗದಿಂದ ಉಲ್ಟಾ ತಿರುಗಿ ಕ್ಯಾಬ್ ನಿಂತಿದೆ ಎಂದು ಗಾಯಾಳು ಕೇಶವಮೂರ್ತಿ ಹಲಸೂರು ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಯಜೂರ್ ಮೆಗ್ಲಾನಿ ಹೈಡ್ರಾಮಾ:
ಅಪಘಾತ ಸ್ಥಳದಲ್ಲಿ ಕುಡಿದ ನಶೆಯಲ್ಲಿ ಜವೇರ್ ಮತ್ತು ಗೆಳೆಯನಾದ ಯಜೂರ್ ಮೆಗ್ಲಾನಿ ಹೈಡ್ರಾಮಾ ಮಾಡಿದ್ದಾರೆ. ರಾತ್ರಿಯ ಜಾಲಿ ಡ್ರೈವ್ ನಲ್ಲಿ ಭಾಗಿಯಾಗಿದ್ದ ಯಜೂರ್ ಮೆಗ್ಲಾನಿಯು ಉದ್ಯಮಿ ರಾಜೀವ್ ಮಗ್ಲಾನಿ ಮಗನಾಗಿದ್ದಾನೆ. ಪ್ರತಿಷ್ಠಿತ ರೆ ಗ್ಲೋಬಲ್ ಕನ್ಸ್ಟ್ರಕ್ಷನ್ ಸಂಸ್ಥೆಯ ಮಾಲೀಕ ರಾಜೀವ್ ಮೆಗ್ಲಾನಿ ಮಗ ಕುಡಿದು ಪೊಲೀಸರಿಗೂ ಅಪಘಾತ ಸ್ಥಳದಲ್ಲಿ ಕಾಟ ನೀಡಿದ್ದಾನೆ ಎನ್ನಲಾಗುತ್ತಿದೆ.
ಎರಡೂ ಕಾರ್ ಪೊಲೀಸ್ ವಶಕ್ಕೆ:
ಜಾಲಿ ಡ್ರೈವ್ ಮಾಡಿ ಅಪಘಾತ ಮಾಡಿದ್ದ ಐಶಾರಾಮಿ ಪೋರ್ಷ್ ಕಾರನ್ನು ಹಲಸೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜವೇರ್ ಡಿಕ್ಕಿ ಹೊಡೆದ ಟೊಯೋಟಾ ಇಟಿಯೋಸ್ ಕ್ಯಾಬ್ ಸಹ ಸದ್ಯ ಪೊಲೀಸ್ ವಶದಲ್ಲಿದೆ. ಎರಡೂ ಕಾರನ್ನು ವಶಕ್ಕೆ ಪಡೆದಿರುವ ಹಲಸೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸುತ್ತಿದ್ದಾರೆ.
ಎಫ್.ಐ.ಆರ್:
ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ನೆಗ್ಲಿಜೆನ್ಸ್ ಮತ್ತು ಅಪಾಯಕಾರಿ ಚಾಲನೆ ಎಂದು ಕೇಸ್ ದಾಖಲಾಗಿದೆ. ಎಫ್.ಐ.ಆರ್ ದಾಖಲು ಮಾಡಿರುವ ಹಲಸೂರು ಸಂಚಾರಿ ಪೊಲೀಸರು, ಎಂಹೆಚ್ 03 ಎಹೆಚ್ 0981 ಹಾಗು ಕಾರು ಚಾಲಕ ಜವೇರ್ ಮೆವಾನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿದ್ದಾರೆ.
ಶ್ರೇಯಾ ಪೊಲೀಸ್ ಠಾಣೆಗೆ ಬರಲು ಸೂಚನೆ:
ಕಾರು ಚಾಲಕನಾದ ಉದ್ಯಮಿ ಮಗ ಜವೇರ್ ಮೆವಾನಿ ಪತ್ನಿ ಶ್ರೇಯಾರನ್ನು ಠಾಣೆಗೆ ಕರೆಸಲು ಸಹ ಸೂಚನೆ ನೀಡಲಾಗಿದೆ. ಕಾರು ಅಪಘಾತ ನಡೆದಾಗ ಕಾರಿನಲ್ಲಿ ಜವೇರ್ ಪತ್ನಿ ಶ್ರೇಯಾ ಸಹ ಇದ್ದರು ಎನ್ನುವುದು ದೃಢಪಟ್ಟಿದೆ.
ಡಾಕ್ಯುಮೆಂಟ್ಸ್ ಪಕ್ಕಾ:
ತನಿಖೆಯ ವೇಳೆ ಉದ್ಯಮಿ ಮಗ ಜುವೇರ್ ಬಳಿ ಎಲ್ಲ ದಾಖಲೆಗಳಿದ್ದವು. ಆರ್.ಸಿ, ಡಿ.ಎಲ್, ಇನ್ಸುರನ್ಸ್ ಸೇರಿದಂತೆ ಎಲ್ಲವೂ ಚಾಲ್ತಿಯಲ್ಲಿರುವುದು ದೃಢಪಟ್ಟಿದೆ. ಆದರೆ, ಡ್ರಿಂಕ್ & ಡ್ರೈವ್ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ವೈದ್ಯಕೀಯ ಪರೀಕ್ಷಾ ವರದಿ ಇದೀಗ ಪಡೆದಿದ್ದು, ಮುಂದಿನ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಹಲಸೂರು ಪೊಲೀಸರು ಮಾಹಿತಿ ನೀಡಿದ್ದಾರೆ.