ಬೆಂಗಳೂರು: ಇಂದು ಸಿಎಂ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ ನಡೆಯಲಿದ್ದು, ಮುಂದಿನ ತಿಂಗಳಲ್ಲಿ ನಡೆಯಬೇಕಾದ ಜಂಟಿ ಅಧಿವೇಶನದ ದಿನಾಂಕವನ್ನು ನಿಗದಿ ಮಾಡುವ ಸಾಧ್ಯತೆ ಇದೆ.
ಸಂಪುಟ ಸಭೆಯಲ್ಲಿ ವಿದ್ಯಾವಿಕಾಸ ಪ್ರೋತ್ಸಾಹದಾಯಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ 93.27 ಕೋಟಿಗಳ ರೂ. ಅಂದಾಜು ವೆಚ್ಚದಲ್ಲಿ ಉಚಿತವಾಗಿ ಸಮವಸ್ತ್ರ ವಿತರಿಸುವ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ.
ಡಾ.ಕೆ. ಶಿವರಾಂ ಕಾರಂತ ಬಡಾವಣೆಗಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಜಮೀನುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡುವ ಸಾಧ್ಯತೆ ಇದೆ.
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 166 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮಗಳನ್ನು ಒಂದೇ ನಿಗಮವನ್ನಾಗಿ ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಜೈಲಿನಲ್ಲಿ ರೌಡಿಗಳಿಂದ ಅವ್ಯವಹಾರ ಆರೋಪ: ಪ್ರಾಥಮಿಕ ವರದಿ ಸಲ್ಲಿಸಿದ ಜೈಲಾಧಿಕಾರಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಅಮರಗೋಳ ಗ್ರಾಮದ ಬ್ಲಾಕ್ ನಂ.89ರಲ್ಲಿ ಸ್ಥಾಪಿಸಲಾದ ಆರ್ಯಭಟ ಐಟಿ ಪಾರ್ಕಿನಲ್ಲಿ ಬಾಕಿ ಉಳಿದ 3 ಎಕರೆ ಜಮೀನನ್ನು 3 ಐಟಿ/ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡಲು ಅನುಮೋದನೆ. ಬೆಳಗಾವಿ ಜಿಲ್ಲೆಯ ತಾಲೂಕಿನ ಕಲ್ಲೋಳ ಯಡೂರು ಟಿಪ್ಪಣಿ ರಸ್ತೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್-ಕಂ-ಬ್ಯಾರೇಜ್ ಮರು ನಿರ್ಮಾಣ ಕಾಮಗಾರಿಯ 35 ಕೋಟಿಗಳ ರೂ. ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ ಇದೆ.
ಏನೆಲ್ಲಾ ಯೋಜನೆಗಳಿಗೆ ಸಿಗಲಿದೆ ಅನುಮತಿ
- 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ರಾಮನಗರದ ಚನ್ನಪಟ್ಟಣ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ
- ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್ ಸಮೀಪದ ಫೈ ಓವರ್ (ಹುಮ್ಮಾಬಾದ್ ಬೇಸ್-ರಾಮಮಂದಿರ ರಸ್ತೆಯ ಭಾಗ) ರೂ.49 ಕೋಟಿಗಳ ಅಂದಾಜು ಮೊತ್ತಕ್ಕೆ ಅನುಮೋದನೆ
- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳ ಪರಿಷ್ಕೃತ ಅಂದಾಜು 92.81 ಕೋಟಿ ರೂ.ಗಳಿಗೆ ಅನುಮೋದನೆ
- ರಾಜ್ಯ ಗುಪ್ತವಾರ್ತೆ ಘಟಕದ ತರಬೇತಿ ಅಕಾಡೆಮಿ ಸ್ಥಾಪನೆಗೆ ಬೆಂಗಳೂರಿನ ಹುಳಿಮಾವು ಗ್ರಾಮದಲ್ಲಿ 4 ಎಕರೆ 19 ಗುಂಟೆ ಸರ್ಕಾರಿ ಜಮೀನು ಮಂಜೂರು
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ