ಬೆಂಗಳೂರು: ಅನಾವಶ್ಯಕವಾಗಿ ಯಾವುದೇ ನಿರ್ಬಂಧ ಹೇರಬಾರದು, ಯಾವುದು ಅವಶ್ಯಕತೆ ಇದೆಯೋ ಎಷ್ಟು ಪ್ರಮಾಣದಲ್ಲಿ ಅಗತ್ಯವಿದೆಯೋ ಅಷ್ಟು ನಿಯಮಗಳನ್ನು ಮಾತ್ರ ಅಳವಡಿಸಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ ಅಗತ್ಯ ಪ್ರಮಾಣದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕೋವಿಡ್ ಸ್ಥಿತಿಗತಿಗಳನ್ನೆಲ್ಲಾ ಪ್ರಧಾನಿಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಏಪ್ರಿಲ್ 9ರ ನಂತರ ಮಾತ್ರ ಬೆಂಗಳೂರಿನಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಅದರ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸುತ್ತಿದ್ದೇವೆ. ಪ್ರತಿದಿನ 30,000 ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಅದರಲ್ಲಿ 10,000 ಟೆಸ್ಟ್ ಬೆಂಗಳೂರಿನಲ್ಲೇ ನಡೆಸಲಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ: ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಅವರ ಟೆಲಿ ಟ್ರಾಕಿಂಗ್ ಕೂಡ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ಇಂಡೋನೇಷಿಯಾ, ನ್ಯೂಜಿಲ್ಯಾಂಡ್, ಸೌತ್ ಕೊರಿಯಾ ಕಡೆಯಿಂದ ಬರುವವರ ಮೇಲೆ ಎಚ್ಚರಿಕೆ ವಹಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಬೆಡ್ ಸರ್ಕಾರಿ ವಲಯದ ಆಸ್ಪತ್ರೆಯಲ್ಲಿದೆ. ಒಂದು ಲಕ್ಷಕ್ಕೂ ಹೆಚ್ಚು ಬೆಡ್ ಖಾಸಗಿ ಆಸ್ಪತ್ರೆಯಲ್ಲಿವೆ. ಅಗತ್ಯ ಆಮ್ಲಜನಕ ದಾಸ್ತಾನಿದೆ ಎಂದು ಪ್ರಧಾನಿ ಮೋದಿಗೆ ತಿಳಿಸಿದ್ದೇವೆ ಎಂದರು.
ನಮ್ಮ ಮಾಹಿತಿ ಆಲಿಸಿದ ನಂತರ ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಅನುಮತಿ ನೀಡಿದ್ದು, ಶಾಲೆಗಳಲ್ಲಿ ಅಭಿಯಾನದ ರೀತಿಯಲ್ಲಿ ಲಸಿಕೆ ಹಾಕಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. 15ರಿಂದ 18 ವರ್ಷದ ಮಕ್ಕಳಿಗೂ ವ್ಯಾಕ್ಸಿನ್ ನೀಡಿಕೆ ಚುರುಕುಗೊಳಿಸಿದ್ದಾರೆ. ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಅಗತ್ಯ ಕ್ರಮಗಳನ್ನು ಕಡ್ಡಾಯಗೊಳಿಸಲು ಪ್ರಧಾನಿ ಸೂಚಿಸಿದ್ದಾರೆ.
ಲಸಿಕೆಗೆ ಹೆಚ್ಚು ಒತ್ತು: ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು, ಅಗ್ನಿ ಅವಘಡಗಳು ಆಗದಂತೆ ಆಸ್ಪತ್ರೆಗಳ ಆಡಿಟ್ ಮಾಡಿಸಬೇಕು ಎಂದು ಸೂಚನೆ ಕೊಡಲಾಗಿದೆ. ನಮ್ಮ ಲಸಿಕೀಕರಣ ಉತ್ತಮವಾಗಿ ಆಗಿದ್ದರಿಂದಲೇ ಮೂರನೇ ಅಲೆ ನಿಯಂತ್ರಿಸಲು ಸಾಧ್ಯವಾಗಿದೆ. ಹೀಗಾಗಿ ಲಸಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು, ಇದರ ಜೊತೆಗೆ ಆರ್ಥಿಕತೆಯೂ ಅದೇ ರೀತಿ ಮುಂದುವರಿಯಬೇಕು ಎಂದು ತಿಳಿಸಿದ್ದಾರೆ ಎಂದರು.
ಪ್ರಧಾನಿ ಸೂಚನೆಯಂತೆ ರಾಜ್ಯದಲ್ಲಿ ಆರು ವರ್ಷದಿಂದ 12 ವರ್ಷದ ಮಕ್ಕಳಿಗೆ ಲಸಿಕಾ ಅಭಿಯಾನ ಮಾಡಲಾಗುತ್ತದೆ. 15ರಿಂದ 18 ಮತ್ತು 60 ವರ್ಷದ ಮೇಲಿನವರಿಗೆ ಇನ್ನಷ್ಟು ಪ್ರಮಾಣದಲ್ಲಿ ಲಸಿಕಾ ಅಭಿಯಾನ ನಡೆಸಲಾಗುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಅಲ್ಲಿ ಪಾಸಿಟಿವ್ ಬಂದರೆ ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಪೆಟ್ರೋಲ್ - ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಪ್ರಧಾನಿ ಒತ್ತಾಯ