ಬೆಂಗಳೂರು : ಸಿಎಂ ಪುತ್ರ ವಿಜಯೇಂದ್ರ ಮೇಲಿನ ಭ್ರಷ್ಟಾಚಾರ ಆರೋಪ ಸದನದಲ್ಲಿ ಕೋಲಾಹಲ ಎಬ್ಬಿಸಿತು. ಭ್ರಷ್ಟಾಚಾರದ ವಿಚಾರ ಸಿಎಂ- ಪ್ರತಿಪಕ್ಷ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯೇಂದ್ರ ಮೇಲಿನ ಭ್ರಷ್ಟಾಚಾರದ ಆರೋಪ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರ ಪ್ರಾರಂಭವಾಯಿತು. ಇದೇ ವೇಳೆ ಎದ್ದುನಿಂತ ಸಿಎಂ ಯಡಿಯೂರಪ್ಪ, ಒಂದು ವೇಳೆ ನೀವು ಮಾಡುವ ಆರೋಪದಲ್ಲಿ ಕಿಂಚಿತ್ತು ಸತ್ಯಾಂಶ ಇದ್ದರೆ, ನಾನು ರಾಜಕೀಯ ಜೀವನದಿಂದ ರಾಜೀನಾಮೆ ನೀಡುತ್ತೇನೆ. ನೀವು ಆರೋಪವನ್ನು ಪ್ರೂವ್ ಮಾಡಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು. ಒಂದು ವೇಳೆ ನಿಮಗೆ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದರೆ ನೀವು ಪ್ರತಿಪಕ್ಷ ನಾಯಕನ ಸ್ಥಾನದಿಂದ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ನನ್ನ ಮಗ ವಿಜಯೇಂದ್ರ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಭ್ರಷ್ಟಾಚಾರ ಮಾಡಿರುವುದನ್ನು ಪ್ರೂವ್ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ನಿಮಗೆ ತಲೆ ಕೆಟ್ಟಿದೆಯೇ ಸಿದ್ದರಾಮಯ್ಯನವರೇ?. ಇದರಲ್ಲಿ ಒಂದಂಶ ಸತ್ಯವಿಲ್ಲ. ನೀವು ರಾಜೀನಾಮೆ ಕೊಡ್ತೀರಾ?. ನಿಮಗೆ ನಾಚಿಕೆ ಆಗ್ಬೇಕು ರೀ ಎಂದು ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ, ಯಾರೋ ಮಾತಾಡಿದ್ದಕ್ಕೆ ಯಡಿಯೂರಪ್ಪ ಹೆಸರನ್ನು ಹೇಗೆ ತರ್ತೀರಾ?. ಅದು ನಿಮ್ಮ ಸರ್ಕಾರದ ಪಾಪ. ಅದನ್ನು ನಾವು ಹೊರಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಬಾಯಿಮುಚ್ಚಿಸೋಕೆ ಆಗಲ್ಲ ಮಾಧುಸ್ವಾಮಿ. ಚೀಫ್ ಮಿನಿಸ್ಟರ್ ಅಲ್ಲ ಯಾರ ಕೈಯಲ್ಲೂ ಆಗಲ್ಲ?. ನನ್ನನ್ನು ಹೆದರಿಸ್ತೀರ ನೀವು. ಯಾರ ಕೈಯಲ್ಲಿ ಏನೂ ಮಾಡೋಕೆ ಆಗಲ್ಲ. ತನಿಖೆಗೆ ಕೊಡಿ ನಿಜಾಂಶ ಹೊರಬರಲಿ ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸ್ಟಿಂಗ್ ಕಾರ್ಯಾಚರಣೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಸುಪ್ರೀಂಕೋರ್ಟ್ ಈ ಬಗ್ಗೆ ಸ್ಪಷ್ಟ ಆದೇಶ ನೀಡಿದೆ. ಒಂದು ವೇಳೆ ನಿಮ್ಮಲ್ಲಿ ದಾಖಲೆ ಇದ್ದರೆ ನ್ಯಾಯಾಲಯದ ಮೊರೆ ಹೋಗಿ. ಅದರ ಬಗ್ಗೆ ದೂರು ನೀಡಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಸವಾಲು ಹಾಕಿದರು.
ಒಂದು ವೇಳೆ ನಾನು ಸಿಎಂ ಆಗಿದ್ದರೆ, ಕೂಡಲೇ ತನಿಖೆಗೆ ಆದೇಶ ನೀಡುತ್ತಿದ್ದೆ. ಪ್ರಕರಣ ಸಂಬಂಧ ತನಿಖೆ ನಡೆಸಿ, ಒಂದು ವೇಳೆ ಆರೋಪ ಸಾಬೀತಾಗದಿದ್ದರೆ, ನಾನು ಪ್ರತಿಪಕ್ಷ ನಾಯಕ ಸ್ಥಾನದಿಂದ ರಾಜೀನಾಮೆ ನೀಡುತ್ತೇನೆ. ವಿಜಯೇಂದ್ರ ಮೇಲೆ ಸುಮ್ಮನೆ ಆರೋಪ ಮಾಡ್ತಿಲ್ಲ. ನನ್ನ ಬಳಿ ಎಲ್ಲಾ ಎವಿಡೆಂಟ್ಸ್ ಇವೆ. ಕಂಟ್ರಾಕ್ಟರ್‌ನಿಂದ ಹಣದ ಬೇಡಿಕೆ ಆಡಿಯೋ ಇದೆ. ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ದಾಖಲೆ ಇವೆ. ಅದನ್ನೂ ನೀಡುತ್ತಿದ್ದೇನೆ, ತೆಗೆದುಕೊಳ್ಳಿ. ವಾಟ್ಸ್‌ಆ್ಯಪ್ ಸಂಭಾಷಣೆಯ ಆಡಿಯೋ ಇದೆ. ಅದನ್ನೂ ಕೂಡ ನೀಡ್ತಿದ್ದೇನೆ ತೆಗೆದುಕೊಳ್ಳಿ. ಇದರ ಬಗ್ಗೆ ತನಿಖೆ ಮಾಡಿಸಿ, ಸತ್ಯಾಂಶ ಹೊರಬರಲಿ ಎಂದು ಮಾಧುಸ್ವಾಮಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ವಿರೂಪಾಕ್ಷಪ್ಪ ಮರಡಿ ಯಾರು ಗೊತ್ತಿಲ್ವಾ?. ಈಗ ಪಿಡಬ್ಲ್ಯುಡಿ ಮಿನಿಸ್ಟರ್ ಸಲಹೆಗಾರರಾಗಿಲ್ವಾ?. ಹಾಗಿಲ್ಲವೆಂದರೆ ಇಲ್ಲಾ ಅಂತ ಮೊದಲು ಹೇಳಿ. ಹೂ ಈಸ್ ವಿಜಯೇಂದ್ರ, ಹೂ ಈಸ್ ಮರಡಿ?. ಅವರು ಯಾರು ಅನ್ನೋದನ್ನ ಹೇಳಿ. ಈ ಪ್ರಕರಣದಲ್ಲಿ ಸತ್ಯಾಂಶವಿಲ್ಲವೆಂದರೆ ನಾನು ರಾಜೀನಾಮೆ ನೀಡ್ತೇನೆ. ಮೊದಲು ತನಿಖೆಗೆ ಕೊಡಿ, ಸತ್ಯಾಂಶ ಹೊರಬರಲಿ ಎಂದು ಒತ್ತಾಯಿಸಿದರು.
ಡಿಕೆಶಿ ಮೌನಕ್ಕೆ ಶರಣು : ಈ ಸಂಪೂರ್ಣ ವಾಕ್ಸಮರ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಯಿತು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯುತ್ತಿದ್ರೆ, ಇತ್ತ ಡಿಕೆಶಿ ಏನೂ ಮಾತನಾಡದೆ ಮೌನವಾಗಿದ್ದರು. ಕಾಂಗ್ರೆಸ್ನ ಶಾಸಕರೆಲ್ಲರೂ ಎದ್ದು ನಿಂತು ಸಿದ್ದರಾಮಯ್ಯಗೆ ಬೆಂಬಲಕ್ಕೆ ನಿಂತರು. ಆದರೆ, ಡಿಕೆಶಿ ಮಾತ್ರ ಮೌನಕ್ಕೆ ಶರಣಾಗಿದ್ದು, ಎಲ್ಲರ ಗಮನ ಸೆಳೆಯಿತು.