ಬೆಂಗಳೂರು: ಇತ್ತೀಚೆಗಷ್ಟೇ ಧಾರವಾಡದ ಕುಮಾರೇಶ್ವರ ನಗರದಲ್ಲಿ ಕಾಮಗಾರಿ ಹಂತದಲ್ಲಿದ್ದ ಕಟ್ಟಡ ಕುಸಿದು ಬಿದ್ದು 19 ಜನ ಕಾರ್ಮಿಕರು ಪ್ರಾಣ ಕಳೆದುಕೊಂಡರು. ಇದೇ ತರಹದ ಮತ್ತೊಂದು ಘಟನೆ ಜಿಲ್ಲೆಯಲ್ಲೂ ನಡೆಯುವ ಸ್ಥಿತಿ ನಿರ್ಮಾಣವಾಗಿದೆ.
35 ವರ್ಷಗಳ ಹಳೆ ಕಟ್ಟಡದಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು, ಹಳೆ ಕಟ್ಟಡದ ಮೇಲೆ ಮತ್ತೊಂದು ಹೊಸ ಕಾಮಗಾರಿ... ಈ ಎಲ್ಲಾ ದೃಶ್ಯಗಳು ಕಂಡು ಬರುತ್ತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಿ ಸುಮಾರು 35 ವರ್ಷಗಳೇ ಕಳೆದಿದ್ದು, ಆಸ್ಪತ್ರೆ ಶಿಥಿಲಗೊಂಡಿದೆ. ಈಗಾಗಲೇ ಆಸ್ಪತ್ರೆ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಹೀಗಿರುವಾಗ 14 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಥಿಲಗೊಂಡಿರುವ ಆಸ್ಪತ್ರೆ ಕಟ್ಟಡದ ಮೇಲೆ ಮತ್ತೊಂದು ಕಟ್ಟಡ ನಿರ್ಮಿಸಲು ಮುಂದಾಗಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಕರ್ನಾಟಕ ಹೆಲ್ತ್ ಸಿಸ್ಟಂ ರಿಫಾರ್ಮ್ ಅಂಡ್ ಡೆವಲಪ್ಮೆಂಟ್ ಪ್ರಾಜೆಕ್ಟ್ (KSSRDP) ಅನುದಾನದಡಿ ಸುಮಾರು 14 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆ ಆವರಣದಲ್ಲಿ ಬೇಕಾದಷ್ಟು ಖಾಲಿ ಜಾಗ ಇದ್ದರೂ ಶಿಥಿಲಗೊಂಡಿರುವ ಹಳೆ ಕಟ್ಟಡದ ಮೇಲೆ ಹೊಸ ಕಟ್ಟಡ ಕಟ್ಟಿ ದುಡ್ಡು ಹೊಡೆಯುವ ಹುನ್ನಾರ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಸಂಜಯ್ ಅವರ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.