ಬೆಂಗಳೂರು : ನಗರದ ಸಿಂಗಸಂದ್ರದ ಏರ್ ಕ್ರಾಪ್ಟ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಬಡಾವಣೆಯ ಪಾರ್ಕ್ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿರುವ ಕಟ್ಟಡಗಳ ತೆರವು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪಾರ್ಕ್ಗೆ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದು, ಅವುಗಳನ್ನು ತೆರವು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಿಂಗಸಂದ್ರ ನಿವಾಸಿ ಎಸ್. ಕೆ. ಮಂಜುನಾಥ್ ಪಿಐಎಲ್ ಸಲ್ಲಿಸಿದ್ದರು.
ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ, ಬಿಡಿಎ ಮತ್ತು ಬಿಬಿಎಂಪಿ ಆಯುಕ್ತರು, ಏರ್ ಕ್ರಾಫ್ಟ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಆರೋಪ : ಬಡಾವಣೆಯಲ್ಲಿ ಉದ್ಯಾನ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 39 ನಿವೇಶನ ಮತ್ತು 3 ಸಿಎ ನಿವೇಶನಗಳನ್ನು ದುರ್ಬಳಕೆ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸಂಬಂಧ ಬಿಬಿಎಂಪಿ ಅಥವಾ ಬಿಡಿಎ ಯಾವುದೇ ಕ್ರಮಕೈಗೊಂಡಿಲ್ಲ.
ಹೀಗಾಗಿ, ಸೊಸೈಟಿಯಿಂದ ನಿರ್ಮಾಣವಾಗಿರುವ ಬಡಾವಣೆಯಲ್ಲಿ ಉದ್ಯಾನ ಜಾಗ ಮತ್ತು ಸಿಎ ನಿವೇಶನಗಳ ಬಗ್ಗೆ ಬಿಬಿಎಂಪಿ ಮತ್ತು ಬಿಡಿಎ ಜಂಟಿ ಸರ್ವೇ ನಡೆಸಲು ನಿರ್ದೇಶಿಸಬೇಕು. ಉದ್ಯಾನಕ್ಕೆ ಮೀಸಲಿಟ್ಟಿದ್ದ ನಿವೇಶನ ಮತ್ತು ಸಿಎ ನಿವೇಶನದಲ್ಲಿ ನಿರ್ಮಾಣ ಮಾಡಲಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಮೂಲ ಉದ್ದೇಶಗಳಿಗೆ ಬಳಸಲು ನಿರ್ದೇಶಿಸಬೇಕು ಎಂದು ಅಜಿರ್ದಾರರು ಕೋರಿದ್ದಾರೆ.