ಬೆಂಗಳೂರು: ಸರ್ಕಾರ ಎಂದರೆ ಸರ್ವಾಧಿಕಾರ ಅಲ್ಲ, ಸಂವಿಧಾನಕ್ಕೆ ತಕ್ಕ ಹಾಗೆ ಸರ್ಕಾರ ನಡೆಸಿಕೊಂಡು ಹೋಗಬೇಕು ಎಂದು ಖ್ಯಾತ ಲೇಖಕಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಬಸ್ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಈ ಬಗ್ಗೆ ಮಾತನಾಡಿದ ಬಿ.ಟಿ ಲಲಿತಾ ನಾಯಕ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜನರಿಗೆ ಹತ್ತಿರವಾದಂತಹ ನಿಗಮ, ಸರ್ಕಾರಿ ನೌಕರರಿಗೆ ಕೊಡುವಂತಹ ಸ್ಥಾನಮಾನವನ್ನು ಕೊಡಬೇಕಾದದ್ದು ಸರ್ಕಾರದ ಅದ್ಯ ಕರ್ತವ್ಯ. ಸಿಬ್ಬಂದಿ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸರ್ಕಾರ ನ್ಯಾಯಸಮ್ಮತವಾಗಿ ಸಂಬಳ ಕೊಟ್ಟರೆ ಸಾಕು, ವೇತನ ಆಯೋಗದ ನಿಯಮಗಳ ರೀತಿ ಸಂಬಳ ಕೊಡಿ ಎಂದು ಕೇಳುತ್ತಿದ್ದಾರೆ. ಆದರೂ ಸರ್ಕಾರ ಯಾವುದೇ ರೀತಿ ಪ್ರತಿಕ್ರಿಯೆ ನೀಡುತ್ತಿಲ್ಲ. ಲಕ್ಷಾಂತರ ಸಿಬ್ಬಂದಿ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ, ಕೇಸ್ ದಾಖಲಿಸಿ, ಅಮಾನತು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಅಂದರೆ ಸರ್ವಾಧಿಕಾರ ಎಂದು ತಿಳಿದುಕೊಂಡಿದ್ದಾರೆ. ಜನರು ತಟ್ಟೆ ಲೋಟ ಬಡಿದು ಭಿಕ್ಷೆ ಬೇಡಿ ಕೇಳುತ್ತಿದ್ದಾರೆ. ರಾಜಕಾರಣಿಗಳಿಗೆ ಏನೆಲ್ಲಾ ಸಂಬಳ, ಸವಲತ್ತುಗಳಿವೆ. ಒಬ್ಬ ಶಾಸಕ, ಮಂತ್ರಿಗಳಿಗೆ ಕೋಟ್ಯಾಂತರ ರೂಪಾಯಿ ಸೌಲಭ್ಯ ಇದೆ. ಸರ್ಕಾರ ಈ ವಿಷಯವನ್ನು ಎಳೆದುಕೊಂಡು ಹೋಗಬಾರದು, ಅವರೂ ಸಹ ಮನುಷ್ಯರು. ಸಾರಿಗೆ ನೌಕರರು ಅನಾಥರಲ್ಲ, ಏಕಾಂಗಿಗಳಲ್ಲ, ಅವರ ಜೊತೆ ನಾವೆಲ್ಲಾ ಇದ್ದೇವೆ ಎಂದು ಖಡಕ್ ಎಚ್ಚರಿಕೆ ರವಾನಿಸಿದರು.
ಪ್ರಜೆಗಳಿಂದ ಆಯ್ಕೆ ಆಗಿ ಬಂದಂತಹ ಸೇವಕರು ನೀವು, ಆದ್ದರಿಂದ ಅವರ ಬೇಡಿಕೆಗಳಿಗೆ, ರೈತರ ಬೇಡಿಕೆಗಳಿಗೆ ಮನ್ನಣೆ ಕೊಡದಿದ್ದರೆ ನೀವು ಯಾರಿಗಾಗಿ ಇರುತ್ತೀರಿ ಎಂದು ಪ್ರಶ್ನಿಸಿದರು. ಜೊತೆಗೆ ಸಾರ್ವಜನಿಕರು ರೊಚ್ಚಿಗೇಳುವ ಮೊದಲು ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಎಚ್ಚರಿಕೆ ನೀಡಿದರು.