ಬೆಂಗಳೂರು: ಶಾಸಕರ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದರು.
ವಿತ್ತೀಯ ಕಾರ್ಯಕಲಾಪದಲ್ಲಿ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದಾಗ, ಕಾಂಗ್ರೆಸ್-ಜೆಡಿಎಸ್ನ ಹಲವು ಶಾಸಕರು ಅನುದಾನ ಕಡಿತ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಕೂಡ ಆಕ್ಷೇಪಿಸಿ ಮಾತನಾಡಿದಾಗ, ಸದನದಲ್ಲಿ ಗದ್ದಲ, ಗೊಂದಲ ಉಂಟಾಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕಾಗಿ ತಾತ್ಕಾಲಿಕವಾಗಿ ಅನುದಾನ ಬಿಡುಗಡೆಗೆ ತಡೆ ನೀಡಲಾಗಿದೆ. ಮುಂದೆ ತಾರತಮ್ಯವಾಗದಂತೆ ಸರಿಪಡಿಸುವುದಾಗಿ ಹೇಳಿದರು.
ಯಾವುದೇ ತಾರತಮ್ಮವಿಲ್ಲದೆ ಅನುದಾನ ಹಂಚಿಕೆ ಸರಿಪಡಿಸುವುದಾಗಿ ಹೇಳಿದರು. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಅನುದಾನ ಹಂಚಿಕೆ ವಿಚಾರದಲ್ಲಿ ವಾಗ್ವಾದ ಏರಿದ ದನಿಯಲ್ಲಿ ಮುಂದುವರೆದಿತ್ತು. ಆಗ ಮತ್ತೆ ಮಾತನಾಡಿದ ಬಿಎಸ್‌ವೈ, ಈಗಾಗಲೇ ವ್ಯತ್ಯಾಸ ಸರಿಪಡಿಸುವುದಾಗಿ ಭರವಸೆ ನೀಡಿದ್ದೇನೆ. ಶಾಸಕರಿಗೆ ಆತಂಕ ಬೇಡ. ಈ ಬಗ್ಗೆ ಚರ್ಚೆ ಮುಂದುವರೆಸುವುದು ಬೇಡ ಎಂದರು.