ಬೆಂಗಳೂರು: ಪ್ರತಿ ಕಂದನಿಗೂ ತಾಯಿಯ ಎದೆಹಾಲು ಅಮೃತ. ಆದರೆ, ಕಾಲಕ್ರಮೇಣ ಆಧುನಿಕತೆಯ ಗೀಳಿಗೆ ಬಿದ್ದು ಅದೆಷ್ಟೋ ತಾಯಂದಿರು ಮಗುವಿಗೆ ಎದೆಹಾಲು ಕೊಡುವುದನ್ನು ನಿಲ್ಲಿಸಿದ್ದಾರೆ. ಸ್ತನ್ಯಪಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟ ರಸ್ತೆಯ ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಶಿಶುತಜ್ಞೆ ಡಾ. ಪ್ರಕಾಶ ವೇಮಗಲ್, ಯಾರಾದರೂ ಎದೆಹಾಲಿಗೆ ಪರ್ಯಾಯವಾಗಿ ಎನನ್ನಾದರೂ ಸಂಶೋಧನೆ ಮಾಡಿದರೆ, ಅವರು ನೊಬೆಲ್ ಬಹುಮಾನ ಪಡೆಯುವುದು ಖಚಿತ. ಮುಂದಿನ ಎರಡು ತಲೆಮಾರು ಕಳೆಯುವವರೆಗೆ ಯಾರೂ ಇದನ್ನು ಸಂಶೋಧನೆ ಮಾಡಲು ಸಾಧ್ಯವಿಲ್ಲ. ಸ್ತನ್ಯಪಾನ ಮಾಡಿದ ಮಕ್ಕಳು ಇತರರಿಗಿಂತ 100 ಪಟ್ಟು ಹೆಚ್ಚು ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ. ಇದು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎದೆಹಾಲು ಇಲ್ಲದ ಮಕ್ಕಳು ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗುವುದನ್ನು ನಾವು ಗಮನಿಸಿದ್ದೇವೆ. ಹಾಗಾಗಿ, ನನ್ನ ಸಲಹೆ ಮಗುವಿನ ಉತ್ತಮ ಆರೋಗ್ಯಕ್ಕೆ ಎದೆಹಾಲನ್ನು ನೀಡಬೇಕು ಎಂದು ಸಲಹೆ ನೀಡಿದರು.

ನಂತರ ಅರಿವಳಿಕೆ ತಜ್ಞ ಹಾಗೂ ಕ್ಲಿನಿಕಲ್ ಲೀಡರ್ ಆದ ಡಾ. ಮಹೇಶ್ ಡಿ.ಸಿ ಮಾತನಾಡಿ, ನಾವು ನಮ್ಮ ತಾಯಂದಿರಿಗೆ ಮತ್ತು ಸಾಮಾನ್ಯ ಜನರಿಗೆ ಎದೆಹಾಲುಣಿಸುವಿಕೆಯ ಮಹತ್ವದ ಬಗ್ಗೆ ತಿಳಿಸುತ್ತೇವೆ. ಆರು ತಿಂಗಳವರೆಗೆ ತಾಯಂದಿರು ಪ್ರತ್ಯೇಕವಾಗಿ ಎದೆಹಾಲು ನೀಡಬೇಕು. ಶಿಶುಗಳು ಮತ್ತು ಮಗುವಿಗೆ ಎರಡು ವರ್ಷ ತುಂಬುವವರೆಗೂ ಇದನ್ನು ಮುಂದುವರಿಸಬಹುದು. ತಾಯಿಯು ತನ್ನ ಮಗುವಿಗೆ ನೀಡಬಹುದಾದ ಪ್ರಮುಖ ಉಡುಗೊರೆ ಎಂದರೆ ಅದು ಎದೆಹಾಲು. ಇದರಿಂದ ತಾಯಿಗೆ ಹಲವಾರು ಅನುಕೂಲಗಳಿವೆ. ಸ್ತನ್ಯಪಾನ ಮಾಡುವ ತಾಯಂದಿರ ದೇಹದಲ್ಲಿ ಆಕ್ಸಿಟೋಸಿನ್ ಎಂಬ 'ಸಂತೋಷದ ಹಾರ್ಮೋನ್' ಉತ್ಪಾದನೆಯಾಗುತ್ತದೆ. ಇದು ತಾಯಂದಿರಲ್ಲಿ ಹೊಳಪನ್ನು ಮೂಡಿಸುತ್ತದೆ. ಹಾಗೆಯೇ ತಾಯಿ ಮತ್ತು ಮಗುವಿನ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ. ಪ್ರತಿ ಸ್ತನ್ಯಪಾನ ಸಮಯದಲ್ಲಿ ತಾಯಿ 500 ಕ್ಯಾಲೊರಿಗಳನ್ನು ಕಳೆದುಕೊಳ್ಳುತ್ತಾಳೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ದಿಯಾ ಚಿತ್ರ ಖ್ಯಾತಿಯ ಖುಷಿ ರವಿ, ಮಕ್ಕಳ ತಜ್ಞರು ಹಾಗೂ ಸ್ತ್ರೀ ತಜ್ಞರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: ಸ್ನಾನ ಗೃಹದಲ್ಲಿ ಜಾರಿ ಬಿದ್ದ ಹಿರಿಯ ನಟಿ ಡಾ. ಲೀಲಾವತಿ ಬೆನ್ನುಮೂಳೆಗೆ ಸಣ್ಣ ಪೆಟ್ಟು: ಒಂದು ತಿಂಗಳ ವಿಶ್ರಾಂತಿ