ಬೆಂಗಳೂರು: ದೀಪಾವಳಿ ಹಬ್ಬದ ದಿನವೇ ನಗರದಲ್ಲಿ ಪಟಾಕಿ ಅವಘಡ ಸಂಭವಿಸಿದೆ. ಬಣ್ಣ ಬಣ್ಣದ ಪಟಾಕಿಗಳು ಮಕ್ಕಳ ಖುಷಿಯನ್ನು ಹೆಚ್ಚಿಸಿದ್ರೂ, ಅದರ ಹಿಂದೆಯೇ ಅಪಾಯ ಕಾದಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ.
ಈಗಾಗಲೇ 9 ವರ್ಷದ ಬಾಲಕನ ಕಣ್ಣಿಗೆ ಪಟಾಕಿಯಿಂದ ಹಾನಿಯಾಗಿದ್ದು, ಮುಖದ ಚರ್ಮ ಸುಟ್ಟು ಹೋಗಿದೆ. ಸದ್ಯ ಬಾಲಕ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಸವನಗುಡಿ ನಿವಾಸಿಯಾಗಿರುವ ಈ ಬಾಲಕ ನಿನ್ನೆ (ಬುಧವಾರ) ರಾತ್ರಿ ತನ್ನ ಮನೆಯಲ್ಲಿ ಫ್ಲವರ್ ಪಾಟ್ (ಹೂಕುಂಡ) ಪಟಾಕಿಯನ್ನು ಸಿಡಿಸಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
ಅದೃಷ್ಟವಶಾತ್ ಬಾಲಕನ ಕಣ್ಣಿನ ದೃಷ್ಟಿಗೆ ಸಮಸ್ಯೆಯಾಗಿಲ್ಲ. ಕಣ್ಣಿನ ರೆಪ್ಪೆ ಹಾಗು ಮುಖದ ಚರ್ಮ ಸುಟ್ಟು ಹೋಗಿದ್ದು, ಕಣ್ಣಿನ ಸುತ್ತ ಗಾಯವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಉಳಿದಂತೆ ನಗರದಲ್ಲಿ ಈ ವರ್ಷ ಪಟಾಕಿ ಅಬ್ಬರ ಕಡಿಮೆಯಾಗಿದ್ದು, ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯವಾದರೂ, ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕಿದೆ. ಮಕ್ಕಳು ಪಟಾಕಿ ಸಿಡಿಸುವಾಗ ಅವರ ಮೇಲೆ ಪೋಷಕರು ನಿಗಾ ವಹಿಸಬೇಕಿದೆ. ಇಲ್ಲದಿದ್ದರೆ ಬೆಳಕಿನ ಹಬ್ಬ ಬದುಕಿಗೆ ಕತ್ತಲು ಮೂಡುವಂತೆ ಮಾಡಲಿದೆ.