ಬೆಂಗಳೂರು: ನಗರದಲ್ಲಿರುವ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಹಾಗೂ ಕ್ರೀಡೆಯ ನಂಟು ಅರ್ಧದಶಕಕ್ಕೂ ಹಳೆಯದ್ದು. ಪ್ರತಿ ವರ್ಷವೂ ಬಲಿಷ್ಠ ಕ್ರೀಡಾಪಟುಗಳನ್ನು ನೀಡುತ್ತಿರುವ ಭಾರತೀಯ ಸೇನೆಯ ಅಂಗ ಸಂಸ್ಥೆ ಈ ಬಾರಿ ವಿಶ್ವವಿಖ್ಯಾತ ದೇಹದಾರ್ಢ್ಯ ಪಟುವನ್ನು ಸೇನೆಗೆ ನೀಡಿದೆ. 241ನೇ ವರ್ಷಾಚರಣೆಯಲ್ಲಿರುವ ಎಂಇಜಿಯ ಕಾರ್ಯಕ್ರಮದಲ್ಲಿ ಸುಬೇದಾರ್ ಅನುಜ್ ಕುಮಾರ್ ತಾಳಿಯಾನ್ ಭಾಗವಹಿಸಿದ್ದರು.
ಸುಬೇದಾರ್ ಅನುಜ್ ತಾಳಿಯಾನ್ ಸಾಧನೆಯ ಹಾದಿ:
ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಲ್ಲಿ ಭಾರತೀಯ ಸೇನೆಗೆ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಅನುಜ್ ತಾಳಿಯಾನ್ 2010ರಲ್ಲಿ ಭಾರತೀಯ ಸೇನೆಗೆ ಸೇರಿದ್ದು, ಆಗ ಕುಸ್ತಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 2012ರ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಮಿಸ್ಟರ್ ಕರ್ನಾಟಕ ಪಟ್ಟ ಪಡೆದರು. 2019ರಲ್ಲಿ ಮಿಸ್ಟರ್ ಇಂಡಿಯಾ ಪಟ್ಟದ ಜೊತೆ, ದಕ್ಷಿಣ ಕೊರಿಯಾದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಅನುಜ್ ತಾಳಿಯಾನ್ ಸಕ್ರಿಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಆಗಿದ್ದು, 2014ರಲ್ಲಿ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದರು. ನಂತರ ಗಾಯಗೊಂಡ ಇವರು ಒಂದು ವರ್ಷ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯಬೇಕಾಯಿತು. 2016ರಲ್ಲಿ ಮತ್ತೆ ಜಿಮ್‌ನಲ್ಲಿ ಕಸರತ್ತು ಪ್ರಾರಂಭಿಸಿ, ಕೆಲವೇ ದಿನದಲ್ಲಿ ಇವರಿಗೆ ಅಪೆಂಡಿಕ್ಸ್ ತೊಂದರೆ ಎದುರಾಯಿತು. ನಂತರ ಶಸ್ತ್ರಚಿಕಿತ್ಸೆ ಪಡೆದ ಇವರಿಗೆ ಮತ್ತೆ ಆರು ತಿಂಗಳ ವಿಶ್ರಾಂತಿ ಅನಿವಾರ್ಯವಾಯಿತು.
ಈಟಿವಿ ಭಾರತದ ಜೊತೆ ಸಾಧನೆಯ ಖುಷಿ ಹಂಚಿಕೊಂಡ ತಾಳಿಯಾನ್:
ಕಸರತ್ತು ಪ್ರಾರಂಭಿಸಿದ್ದ ಇವರಿಗೆ 2018ರಲ್ಲಿ ಅತ್ಯುತ್ತಮ ಅಭಿವೃದ್ಧಿ ಪದಕದ ಜತೆ ಚಿನ್ನದ ಪದಕವೂ ದೊರೆಯಿತು ಎಂದು ಸುಬೇದಾರ್ ಅನುಜ್ ತಾಳಿಯಾನ್ ಈಟಿವಿ ಭಾರತಕ್ಕೆ ವಿವರಿಸಿದರು. ಇವರ ದೇಹದಾರ್ಢ್ಯ ಕ್ರೀಡೆಗೆ ಊಟ ಹಾಗೂ ಪ್ರೊಟೀನ್‌ಗಳ ಆವಶ್ಯಕತೆ ಇರುತ್ತದೆ. ಇದಕ್ಕೆ ಭಾರತೀಯ ಸೇನೆ ಪೂರ್ಣ ಸಹಕಾರ ನೀಡುವ ಜೊತೆಗೆ ಸೇನೆಯ ಚಟುವಟಿಕೆಗಳಿಂದ ವಿನಾಯಿತಿ ಕೂಡ ನೀಡಿದೆ. ಭಾರತೀಯ ಸೇನೆಗೆ ಸೇರುವಂತೆ ತಾಳಿಯಾನ್ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.