ಬೆಂಗಳೂರು: ಬ್ರೇಕ್ ಫೇಲ್ ಆದ ಕಾರಣ ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೇ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಸುಂಕದಕಟ್ಟೆ ಕಡೆಯಿಂದ 245 ಎಂ ಸಂಖ್ಯೆಯ ಕೆಂಪೇಗೌಡ-ವಡ್ಡರಹಳ್ಳಿ ಮಾರ್ಗದ ಬಸ್ ಸುಮ್ಮನಹಳ್ಳಿ ಬಳಿ ಬರುತ್ತಿದ್ದ ವೇಳೆ ಬ್ರೇಕ್ ಫೇಲಾಗಿ ಬರುತ್ತಿತ್ತು. ಈ ವೇಳೆ ಚಾಲಕ ಬಸ್ಅನ್ನು ಕಂಟ್ರೋಲ್ ಮಾಡಿ ಬಲ ಭಾಗಕ್ಕೆ ತಿರುಗಿಸಿಕೊಂಡಿದ್ದಾನೆ. ಈ ವೇಳೆ ಕಾಮಗಾರಿ ನಡೆಯುತ್ತಿದ್ದ ಮಣ್ಣಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ್ದಾನೆ. ಇದೇ ವೇಳೆ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಬೈಕ್ ಸವಾರರು ಸಾವನ್ನಪ್ಪಿ, 20ಕ್ಕೂ ಹೆಚ್ಚು ವಾಹನಗಳು ಜಖಂ ಆಗಿವೆ. ಅಲ್ಲದೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ ಒಂದು ವೇಳೆ ಎಡಭಾಗಕ್ಕೆ ಹೋಗಿದ್ದರೆ 50ಕ್ಕೂ ಹೆಚ್ಚು ಜನ ಬಲಿಯಾಗ್ತಿದ್ರು ಎನ್ನಲಾಗಿದೆ. ಅಪಘಾತವಾದ ಸ್ಥಳದ ಪಕ್ಕದಲ್ಲಿ ದೇವಸ್ಥಾನ ಇದ್ದು, ವೈಕುಂಠ ಏಕಾದಶಿ ಹಿನ್ನೆಲೆ ಹೆಚ್ಚಿನ ಜನ ದೇವಸ್ಥಾನಕ್ಕೆ ಬಂದಿದ್ದಾರೆ. ಬಿಎಂಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ಆಗಿಲ್ಲ. ಸದ್ಯಕ್ಕೆ ಇಬ್ಬರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.