ಬೆಂಗಳೂರು: ನಗರದ ಪೊಲೀಸರು ಡ್ರಗ್ಸ್ ಮೇಲೆ ಸಮರವನ್ನೇ ಸಾರಿದ್ದಾರೆ. ಡ್ರಗ್ಸ್ ಪೆಡ್ಲರ್ಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಈ ಬಾರಿ ಸೀಜ್ ಮಾಡಿರುವ ಡ್ರಗ್ಸ್ ಬೆಲೆ ಬೆಚ್ಚಿಬೀಳಿಸುವಂತಿದೆ. ಪ್ರಕರಣದಲ್ಲಿ ಇಬ್ಬರು ಆಫ್ರಿಕಾ ಮೂಲದ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಗೋವಿಂದಪುರ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತು ತಂಡ ಜಪ್ತಿ ಮಾಡಿರುವುದು ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಎಂದು ಅಂದಾಜಿಸಲಾಗಿದೆ. ಇವರ ಕೆಲಸಕ್ಕೆ ಪೊಲೀಸ್ ಕಮೀಷನರ್ ಕೂಡ ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.
ಜಪ್ತಿ ಮಾಡಲಾದ ಡ್ರಗ್ಸ್ ಬಗ್ಗೆ ಮಾಹಿತಿ ನೀಡಿದ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್, ನಗರಕ್ಕೆ ಹೊಸ ಮಾದರಿಯ ದುಬಾರಿ ಡ್ರಗ್ಸ್ ಸರಬರಾಜಾಗುತ್ತಿದೆ. ಇದು ಆತಂಕಕಾರಿ ವಿಚಾರವಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಬ್ಲ್ಯಾಕ್ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ವಿದೇಶಗಳಲ್ಲಿ ಕಂಡು ಬರುತ್ತಿದ್ದ ಈ ಡ್ರಗ್ಸ್ ಬೆಂಗಳೂರಿಗೂ ಕಾಲಿಟ್ಟಿರುವುದು, ನಿಜಕ್ಕೂ ಆತಂಕದ ವಿಚಾರ ಎಂದು ತಿಳಿಸಿದ್ದಾರೆ.
ಜಗತ್ತಿನಲ್ಲಿ ಟಾಪ್ ಎಂಡ್ ಡ್ರಗ್ಗಳಲ್ಲಿ ಬ್ಲ್ಯಾಕ್ ಎಂಡಿಎಂಎ ಕೂಡ ಒಂದಾಗಿದೆ. ಕೆಲವು ಐಷಾರಾಮಿ ಹೋಟೆಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈ ಡ್ರಗ್ಸ್ ಸರಬರಾಜು ಮಾಡಿದ್ದ ನೈಜೀರಿಯಾ ಮೂಲದ ಸಿಕ್ಸ್ಟಸ್ ಉಕ್ಚೆಕ್ ಮತ್ತು ಚುಕ್ವಾಡ್ಬೆಮ್ ಎಂಬಿಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.
ಆರೋಪಿಗಳಿಂದ 3 ಕೋಟಿ ರೂ. ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್ಸ್, 120 ಗ್ರಾಂ ಬ್ಲ್ಯಾಕ್ ಎಂಡಿಎಂಎ, 16.5 ಕೆಜಿ ಎಂಡಿಎಂಎ ಮಿಕ್ಸ್ಡ್ ವೀಡ್ ಆಯಿಲ್, 300 ಗ್ರಾಂ ವೀಡ್ ಆಯಿಲ್ ಸೀಜ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ