ಬೆಂಗಳೂರು: ಕಾಂಗ್ರೆಸ್ನಿಂದ ನೇಮಿಸಲಾಗಿರುವ 'ಸತ್ಯಶೋಧನಾ ಸಮಿತಿ' ಸದಸ್ಯರು ಗಲಭೆ ಪೀಡಿತ ಪ್ರದೇಶಗಳಲ್ಲಿ ಶನಿವಾರ ಭೇಟಿ ನೀಡುತ್ತಿದ್ದಂತೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ನೇತೃತ್ವದ 'ಬಿಜೆಪಿ ಪರಿಶೀಲನಾ ಸಮಿತಿ' ಗಲಭೆ ನಡೆದ ಸ್ಥಳಗಳಿಗೆ ಭೇಟಿ ಕೊಟ್ಟಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದೇವೆ. ಜೊತೆಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತೇವೆ. ಇಲ್ಲಿನ ಶಾಸಕರನ್ನು ನೇರವಾಗಿ ಹೊಣೆ ಮಾಡಿ ಅವರ ಕಚೇರಿ, ನಿವಾಸದ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗಿದೆ. ಶಾಸಕ ಶ್ರೀನಿವಾಸ್ ಮೂರ್ತಿ, ಮುನೇಗೌಡ, ಅರುಣ್ ಎಂಬುವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಹಾಗೂ ಫೈರ್ ಬ್ರಿಗೇಡ್ ಕೂಡಾ ತಲುಪಲು ಆಗದೆ ಇರುವ ತರಹ ತಡೆದಿದ್ದಾರೆ. ಪಾರ್ಕಿಂಗ್ ಮಾಡಿರುವ ವಾಹನಗಳನ್ನು ರಸ್ತೆಗೆ ತಂದು ಬೆಂಕಿ ಇಟ್ಟಿದ್ದಾರೆ. ಕಾಶ್ಮೀರದಲ್ಲೂ ಈ ರೀತಿ ಇಲ್ಲ. ನಾವು ಇದನ್ನು ಪಕ್ಷ ಭೇದ ಮರೆತು ಖಂಡಿಸುತ್ತೇವೆ ಎಂದರು.
ಇದು ಕಾಂಗ್ರೆಸ್ ಒಳರಾಜಕೀಯವೋ ಅಥವಾ ಇಲ್ಲಿಯ ರಾಜಕೀಯ ಬೆಳವಣಿಗೆ ಸಹಿಸದೇ ಹಾಗೆ ಮಾಡಿದ್ದಾರೊ, ದಲಿತರ ಮೇಲೆ ನಡೆಯುತ್ತಿರೋ ಅನ್ಯಾಯವೋ ಗೊತ್ತಿಲ್ಲ. ಕಾಂಗ್ರೆಸ್ ಇದನ್ನು ಖಂಡಿಸದೇ ಇದ್ದದ್ದು ದುರ್ದೈವ. ನವೀನ್ ಎಂಬಾತ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಗಲಾಟೆ ಆಯ್ತು ಅಂತಿದಾರೆ. ಅಂದು ಸಂಜೆ 5 ಗಂಟೆಗೆ ಹಾಕಿರುವ ಪೋಸ್ಟ್ ನೋಡಿ ಎಂಟು ಸಾವಿರ ಜನ ಸೇರಿದ್ದು ಹೇಗೆ..? ಇದು ಆಕಸ್ಮಿಕವಾಗಿ ಆಗಿದ್ದಾ..? ವ್ಯವಸ್ಥಿತವಾಗಿದ್ದಾ ಎಂಬ ಅನುಮಾನ ಬರುತ್ತೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನವೀನ್ ಬಿಜೆಪಿ ಕಾರ್ಯಕರ್ತ ಎಂದು ಹೇಳುತ್ತಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಬಿಜೆಪಿ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಅಂತಾನೂ ಹೇಳ್ತಿದ್ದಾರೆ. ಗಲಭೆ ಮಾಡೋಕೆ ಸೇರಿದ ಹತ್ತು ಸಾವಿರ ಜನ ಬಿಜೆಪಿ ಕಾರ್ಯಕರ್ತರಾ? ಎಂದು ಲಿಂಬಾವಳಿ ಪ್ರಶ್ನಿಸಿದರು.
ಈ ಹಿಂದೆ ಮೊದಲು ಶಾಸಕ ತನ್ವೀರ್ ಸೇಠ್, ಈಗ ಅಖಂಡ ಶ್ರೀನಿವಾಸ್ ಮೂರ್ತಿ. ಈ ರೀತಿ ಬಿಡ್ತಾ ಹೋದರೆ ಕರ್ನಾಟಕ ಇಂತಹ ಚಟುವಟಿಕೆಗಳ ತಾಣ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಸ್ಡಿಪಿಐ ಬಿಜೆಪಿ ಪಾಪದ ಕೂಸು ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಿಂಬಾವಳಿ, ನಾವು ಪಾಪನೇ ಮಾಡಿಲ್ಲ. ಕೂಸು ಹೇಗೆ ಹುಟ್ಟುತ್ತೆ? ಎಂದು ವ್ಯಂಗವಾಡಿದರು. ನವೀನ್ ಮುಂಚೆ ಇನ್ಯಾರು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದರು ಅನ್ನೋದೂ ಕೂಡಾ ತನಿಖೆ ಆಗಲಿ. ತನಿಖೆಗೆ ಅಡ್ಡಿಪಡಿಸಬೇಡಿ. ಅದೇ ರೀತಿ ಎನ್ಐಎ ಮೂಲಕ ಈ ಪ್ರಕರಣದ ತನಿಖೆ ನಡೆಸಬೇಕು ಎಂದರು.