ಬೆಂಗಳೂರು: ಶಿಕ್ಷಣ ಪ್ರಜಾಪ್ರಭುತ್ವೀಕರಣ ಆಗಬೇಕೇ ಹೊರತು, ಕೇಸರೀಕರಣವಾಗಬಾರದು. ಇದಕ್ಕೆ ನನ್ನ ವಿರೋಧವಿದೆ. ಹಾಗಾಗಿ ಸರ್ಕಾರಕ್ಕೆ 35 ಕೋಟಿ ರೂ ನಷ್ಟವಾದರೂ ಪರವಾಗಿಲ್ಲ, ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕವನ್ನು ಹಿಂಪಡೆದು, ಹಳೆಯ ಪಠ್ಯವನ್ನೇ ಮುಂದುವರಿಸಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ಸಂಸ್ಕೃತಿ ಎಲ್ಲಿ ಹದಗೆಡುತ್ತೋ ಆ ದೇಶ, ರಾಜ್ಯ ಹಾಳಾಗುತ್ತದೆ. ಈ ವಿಚಾರವನ್ನು ಎಲ್ಲರೂ ಸೇರಿ ಹಾಳು ಮಾಡಲು ನಿಂತಿದ್ದೇವೆ. ಮೂರು ಪಕ್ಷಗಳು ಇದನ್ನು ಪ್ರಣಾಳಿಕೆಯ ವಿಚಾರ ಎಂಬಂತೆ ಚರ್ಚೆ ಮಾಡುತ್ತಿದ್ದಾರೆ. ರಾಜಕಾರಣಿಗಳು ಸೀಮಾರೇಖೆಯನ್ನು ದಾಟಿ ಬಿಟ್ಟಿದ್ದೇವೆ ಎಂದು ಪ್ರಸ್ತುತ ರಾಜಕಾರಣವನ್ನು ತೆಗಳಿದರು.
ಸಚಿವರ ವಿರುದ್ಧ ಬೇಸರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಆರ್ಎಸ್ಎಸ್ ನಾಯಕರನ್ನು ಒಪ್ಪಿಸಿದ್ದೇವೆ ಎಂದಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಯನ್ನು ಒಪ್ಪಬೇಕಾಗಿದ್ದು ಆರ್ಎಸ್ಎಸ್ ನಾಯಕರಲ್ಲ. ಈ ರಾಜ್ಯದ ಪೋಷಕರು, ಶಿಕ್ಷಕರು, ವಿದ್ವಾಂಸರು ಮಕ್ಕಳು ಇದನ್ನು ಒಪ್ಪಿಕೊಳ್ಳಬೇಕು. ಆರ್ಎಸ್ಎಸ್ ನಾಯಕರ ಮುಂದೆ ಮಂಡಿಯೂರಲಾಗಲ್ಲ ಎಂದರು.
ಪಠ್ಯಪುಸ್ತಕ ಪರಿಷ್ಕರಣೆಗೆ 35 ಕೋಟಿ ರೂಪಾಯಿ ಖರ್ಚಾಗಿದ್ದರೂ ಪರವಾಗಿಲ್ಲ. ಈ ಹಿಂದಿನ ಪಠ್ಯವನ್ನೇ ಮುಂದುವರೆಸಿ. ಈ ವಿಚಾರದಲ್ಲಿ ವಿರೋಧ ಪಕ್ಷದವರನ್ನು ಯಾಕೆ ಕರೆದು ಚರ್ಚೆ ಮಾಡಲಿಲ್ಲ. ಸ್ವಾಮೀಜಿಗಳು, ಕ್ರೈಸ್ತರು, ಅಲ್ಪಸಂಖ್ಯಾತ ಮುಖಂಡರನ್ನು ಕರೆಯಿಸಿ ಪಠ್ಯದ ಬಗೆ ಚರ್ಚೆ ನಡೆಸಲಿ. ಮುಂದಿನ ವರ್ಷ ಪುಸ್ತಕ ಪರಿಷ್ಕರಣೆ ಮಾಡಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮುಂದಿನ ಸಿಎಂ ಅಭ್ಯರ್ಥಿ ಜಿ. ಪರಮೇಶ್ವರ್ ಅಂತಾ ಘೋಷಣೆ ಮಾಡಲಿ: ಡಿಕೆಶಿ-ಸಿದ್ದರಾಮಯ್ಯಗೆ ಶೆಟ್ಟರ್ ಸವಾಲು