ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ಸಿದ್ಧತಾ ಕಾರ್ಯ ಆರಂಭಿಸಿರುವ ಬಿಜೆಪಿಯು ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯ, ಸಂಘಟನೆ ಸೇರಿದಂತೆ ಚುನಾವಣಾ ಕಾರ್ಯತಂತ್ರದ ಕುರಿತು ಬೆಂಗಳೂರು ಕೇಂದ್ರ ಜಿಲ್ಲಾ ವಲಯದ ಪದಾಧಿಕಾರಿಗಳ ಸಭೆ ನಡೆಸುತ್ತಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮೂರು ದಿನಗಳ ಸರಣಿ ಸಭೆಯ ಎರಡನೇ ದಿನದ ಸಭೆ ಆರಂಭಗೊಂಡಿದೆ. ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮಹತ್ವದ ಸಭೆ ನಡೆಸುತ್ತಿದ್ದು, ಇಂದು ಬೆಂಗಳೂರು ಕೇಂದ್ರ ಜಿಲ್ಲೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುತ್ತಿದೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಬಿಜೆಪಿ ಕೇಂದ್ರ ವಿಭಾಗದ ಅಧ್ಯಕ್ಷ ಮಂಜುನಾಥ್, ಬೆಂಗಳೂರು ಕೇಂದ್ರ ವಿಭಾಗದ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಬಿಬಿಎಂಪಿ ಚುನಾವಣೆ ತಯಾರಿ, ಅಭ್ಯರ್ಥಿಗಳ ಆಯ್ಕೆ, ಹಾಲಿ ಇರುವವರಿಗೆ ಮತ್ತೆ ಟಿಕೆಟ್ ನೀಡಬೇಕಾ? ಬೇರೆಯವರಿಗೆ ಟಿಕೆಟ್ ನೀಡಬೇಕಾ? ಕೆಲ ವಾರ್ಡ್‌ಗಳಲ್ಲಿ ಪರಾಜಿತ ಅಭ್ಯರ್ಥಿಗಳಿದ್ದು, ಅಲ್ಲಿ ಗೆಲ್ಲಲ್ಲು ಏನು ಮಾಡಬೇಕು? ಕೆಲ ಶಾಸಕರು ಬಿಜೆಪಿಗೆ ಬಂದಿದ್ದು, ಅವರ ಬೆಂಬಲಿಗರೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಮೂಲ ಅಭ್ಯರ್ಥಿಗಳು ಹಾಗೂ ವಲಸೆ ಶಾಸಕರ ಅಭ್ಯರ್ಥಿಗಳ ನಡುವೆ ಸಮನ್ವಯ ಕಾಯ್ದುಕೊಳ್ಳುವುದು ಹೇಗೆ? ಯಾರಿಗೆ ಟಿಕೆಟ್ ನೀಡಬೇಕು ಅನ್ನೋ ಲೆಕ್ಕಾಚಾರ ಕುರಿತು ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಯಲಿದೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ತಾಲೀಮು: ಸಿಎಂ ನಿವಾಸದಲ್ಲಿ ಮಹತ್ವದ ಸಭೆ..!
ಈಗಾಗಲೇ 150 ವಾರ್ಡ್ ಗೆಲ್ಲುವ ಸಂಕಲ್ಪ ತೊಟ್ಟಿದ್ದು, ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಅವರಿಗೆ ಸಾಥ್ ನೀಡಿ ಜನರ ವಿಶ್ವಾಸ ಗೆಲ್ಲುವ ಕುರಿತು ಇಂದಿನ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ