ಬೆಂಗಳೂರು: ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿ ಪುತ್ರನ ರಾಜಕೀಯ ಜೀವನಕ್ಕೆ ನೀರೆರೆಯಲು ಮುಂದಾಗಿದ್ದ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿ ಉನ್ನತ ಮಟ್ಟದ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಭರ್ಜರಿ ಚುನಾವಣಾ ತಂತ್ರಗಾರಿಕೆ ಅನುಸರಿಸಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದು, ಪಕ್ಷಕ್ಕೆ ಲಾಭವಾಗುವ ನಿರ್ಧಾರವನ್ನೇ ಪ್ರಕಟಿಸಿದೆ.
ಇದನ್ನೂ ಓದಿ: ಬಿಜೆಪಿ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ಬಿಎಸ್‌ವೈ
ಪಕ್ಷದ ಅಲಿಖಿತ ನಿಯಮದಂತೆ ಮಾರ್ಗದರ್ಶಕ ಮಂಡಳಿಯೊಂದನ್ನು ಹೊರತುಪಡಿಸಿ ಮತ್ಯಾವ ಹುದ್ದೆಗೂ ಅವಕಾಶವಿಲ್ಲದ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಅನಿರೀಕ್ಷಿತ ಜವಾಬ್ದಾರಿ ನೀಡಿದೆ. ಈ ಮೂಲಕ ತನ್ನದೇ ಅಲಿಖಿತ ನಿಯಮವನ್ನು ಬಿಎಸ್‌ವೈ ಮಟ್ಟಿಗೆ ಸಡಿಲಿಕೆ ಮಾಡಿದೆ. ಇದಕ್ಕೆ ಮುಂಬರಲಿರುವ ಚುನಾವಣೆಯೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಹೈಕಮಾಂಡ್ಗೆ ಮನವರಿಕೆ : ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ಕಡೆಗಣಿಸಿ ಚುನಾವಣೆಗೆ ಹೋದರೆ ಹಿನ್ನಡೆ ಖಚಿತ ಎನ್ನುವುದು ಹೈಕಮಾಂಡ್ ನಾಯಕರಿಗೆ ಮನವರಿಕೆಯಾಗಿದೆ. ಯಡಿಯೂರಪ್ಪ ಅವರಂತೆ ಮಾಸ್ ಇಮೇಜ್ ಇರುವ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿಲ್ಲ.
ಬಿಎಸ್‌ವೈ ಇಮೇಜ್ನ ಲಾಭ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮಾಸ್ ಇಮೇಜ್ ಬೆಳೆಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ರೀತಿಯಲ್ಲೇ ಬೊಮ್ಮಾಯಿ ಕೂಡ ಒಬ್ಬರು ಎನ್ನುವಂತಾಗಿದೆ. ಹಾಗಾಗಿಯೇ ವಯಸ್ಸಿನ ಕಾರಣದಿಂದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ವರ್ಷದಲ್ಲೇ ಪಕ್ಷದ ಅತ್ಯುನ್ನತ ಸಮಿತಿಯಲ್ಲಿ ಅವಕಾಶ ಕಲ್ಪಿಸಿ ಅವರ ಇಮೇಜ್ನ ಲಾಭ ಪಡೆಯಲು ಹೈಕಮಾಂಡ್ ಮುಂದಾಗಿದೆ.
ಯಡಿಯೂರಪ್ಪ ಅನಿವಾರ್ಯತೆ : ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಅಸಮಧಾನಗೊಂಡಂತೆ ಕಾಣಿಸಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರು ಇತ್ತೀಚೆಗೆ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದೆ ತನ್ನ ಅನಿವಾರ್ಯತೆಯನ್ನು ಹೈಕಮಾಂಡ್ ಗಮನಕ್ಕೆ ತರುವಲ್ಲಿ ಸಫಲರಾಗಿದ್ದರು. ಉಪ ಚುನಾವಣೆಗಳ ಹಿನ್ನಡೆ, ಹಿಂದೂಪರ ಕಾರ್ಯಕರ್ತರ ಹತ್ಯೆ ಘಟನೆಗಳಿಂದ ಸ್ವಪಕ್ಷೀಯರಿಂದಲೇ ಭುಗಿಲೆದ್ದ ಅಸಮಧಾನ.. ಹೀಗೆ ಇತ್ಯಾದಿಗಳೆಲ್ಲವೂ ಮತ್ತೆ ಯಡಿಯೂರಪ್ಪ ರಂಗಪ್ರವೇಶದ ಅನಿವಾರ್ಯತೆ ಸೃಷ್ಟಿಸುವಲ್ಲಿ ಯಶಸ್ವಿಯಾದವು.
ಮತಗಳ ಮೇಲೂ ಬಿಜೆಪಿ ಕಣ್ಣು : ಇದರ ಜೊತೆಗೆ ಲಿಂಗಾಯತ ಸಮುದಾಯದ ಮತಗಳ ಸೆಳೆಯಲು ಬಿಎಸ್‌ವೈ ಕಡೆಗಣನೆಯ ಟ್ರಂಪ್ ಕಾರ್ಡ್ ಬಳಕೆಗೆ ಕಾಂಗ್ರೆಸ್ ಮುಂದಾಗಿದೆ. ಇದನ್ನೂ ಸೂಕ್ಷ್ಮತೆಯಿಂದ ಗಮನಿಸಿದ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡು ಯಡಿಯೂರಪ್ಪ ಅವರನ್ನು ಪಕ್ಷದ ಜೊತೆ ಸಕ್ರಿಯವಾಗಿರುವಂತೆ ನೋಡಿಕೊಳ್ಳಲು ಪ್ರಮುಖ ಸ್ಥಾನಗಳನ್ನು ಕಲ್ಪಿಸಿ ಜಾಣ್ಮೆಯ ನಡೆ ಇಟ್ಟಿದೆ.
ಪರೋಕ್ಷ ಎಚ್ಚರಿಕೆ ಕೊಟ್ಟಿದ್ದ ಬಿಎಸ್‌ವೈ : ಮತ್ತೊಂದೆಡೆ ಪುತ್ರ ಬಿ ವೈ ವಿಜಯೇಂದ್ರ ಪರ ಯಡಿಯೂರಪ್ಪ ಮಾಡುತ್ತಿದ್ದ ಲಾಬಿಗಳಿಗೆ ಬ್ರೇಕ್ ಹಾಕಲಾಗಿದೆ ಎಂಬ ಮಾತುಗಳು ಹೇಳಿ ಬಂದಿದ್ದವು. ಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಹೆಸರು ಶಿಫಾರಸು ಮಾಡಿದ್ದರೂ ಹೈಕಮಾಂಡ್ ಕಡೆಗಣಿಸಿತ್ತು. ಈ ನಡೆಗೆ ಬೇಸತ್ತಿದ್ದ ಬಿಎಸ್‌ವೈ ತಮ್ಮ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಪ್ರಕಟಿಸಿ ಹೈಕಮಾಂಡ್ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ, ನಂತರ ಹೈಕಮಾಂಡ್ ನಿರ್ಧರಿಸಲಿದೆ ಎನ್ನುವ ಸಮಜಾಯಿಷಿ ನೀಡಿ ತಾವೇನು ಹೈಕಮಾಂಡ್ಗೆ ತಲುಪಿಸಬೇಕಿತ್ತೋ ಆ ಸಂದೇಶವನ್ನು ತಲುಪಿಸುವಲ್ಲಿ ಸಫಲರಾಗಿದ್ದರು.
ಬಿಎಸ್‌ವೈ ತಂತ್ರಕ್ಕೆ ಹೈಕಮಾಂಡ್ ಲಗಾಮು : ಈಗಲೂ ಕೂಡ ಪುತ್ರ ವಿಜಯೇಂದ್ರನಿಗೆ ಪರಿಷತ್ ಸ್ಥಾನ ನೀಡಿ ಸಂಪುಟಕ್ಕೆ ಸೇರ್ಪಡೆ ಮಾಡುವ ಪ್ರಯತ್ನವನ್ನು ಬಿಎಸ್‌ವೈ ಮುಂದುವರೆಸಿಯೇ ಇದ್ದರು. ಇದೀಗ ಸ್ವತಃ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ಪುತ್ರನ ಪರ ಲಾಬಿ ನಡೆಸುವುದು ಕಷ್ಟ.
ಇದನ್ನೂ ಓದಿ: ಬಿಜೆಪಿಯಲ್ಲಿ ಯಡಿಯೂರಪ್ಪಗೆ ಉನ್ನತ ಸ್ಥಾನಮಾನ.. ಹೈಕಮಾಂಡ್ನಿಂದ ಡ್ಯಾಮೇಜ್ ಕಂಟ್ರೋಲ್ ಹೆಜ್ಜೆ
ಅಲ್ಲದೇ, ಪರಿಷತ್ ಸ್ಥಾನವಾಗಲಿ, ಶಾಸಕ ಸ್ಥಾನಕ್ಕಾಗಲಿ ಅಭ್ಯರ್ಥಿ ಹೆಸರು ಅಂತಿಮಗೊಳಿಸುವ ಸಮಿತಿಯಲ್ಲೇ ಯಡಿಯೂರಪ್ಪ ಇರುವ ಕಾರಣ ಪಕ್ಷಪಾತ ಮಾಡಲು ಅಸಾಧ್ಯ. ಶಿಫಾರಸು, ರಾಜಕೀಯ ಲಾಭ ಇತ್ಯಾದಿ ಮಾನದಂಡಗಳನುಸಾರವೇ ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಬೇಕಾಗಲಿದೆ. ಹಾಗಾಗಿ ಪುತ್ರನಿಗೆ ತಕ್ಷಣದಲ್ಲೇ ಪರಿಷತ್ ಸ್ಥಾನ, ಸಚಿವ ಸ್ಥಾನ ಕಲ್ಪಿಸುವ ಒತ್ತಡ ಹೇರುವ ತಂತ್ರವನ್ನು ಹೈಕಮಾಂಡ್ ಶಮನಗೊಳಿಸಿದಂತಾಗಿದೆ.
ಸ್ಥಾನ ಕೇಳುವ ಅವಕಾಶವೇ ಇಲ್ಲ: ಮೇಲಾಗಿ ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿರುವುದರಿಂದ ಅವರ ಕುಟುಂಬದ ಮತ್ತೊಬ್ಬರಿಗೆ ಪ್ರಮುಖ ಅವಕಾಶ ಕಲ್ಪಿಸುವ ಬೇಡಿಕೆಯೇ ಅಪ್ರಸ್ತುತವಾಗಲಿದೆ. ವಿಜಯೇಂದ್ರಗೆ ಇನ್ನಷ್ಟು ಹೆಚ್ಚಿನ ಸ್ಥಾನಮಾನ ನೀಡದೇ ಇದ್ದರೂ ಯಾವುದೇ ಅಸಮಧಾನ ಏಳುವುದಿಲ್ಲ.
ಇದನ್ನೂ ಓದಿ: ವರ್ಷದ ಬಳಿಕ ಮತ್ತೆ ರಾಜಕೀಯ ಚಟುವಟಿಕೆ ಕೇಂದ್ರವಾದ ಕಾವೇರಿ: ಬಿಎಸ್‌ವೈ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಮುಖಂಡರು
ಯಡಿಯೂರಪ್ಪ ಅವರಿಗೆ ಪಕ್ಷದ ಅತ್ಯುನ್ನತ ಸಮಿತಿಯಲ್ಲಿ ಅವಕಾಶ ಕೊಟ್ಟಿರುವಾಗ ಪುತ್ರನಿಗೆ ರಾಜ್ಯದಲ್ಲಿ ಪ್ರಮುಖ ಸ್ಥಾನ ನೀಡಿಲ್ಲ ಎನ್ನುವುದು ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಇನ್ನೇನಿದ್ದರೂ ವಿಧಾನಸಭಾ ಚುನಾವಣಾ ಟಿಕೆಟ್ ಹಂಚಿಕೆವರೆಗೂ ಪುತ್ರನ ಪರ ಲಾಬಿ ನಡೆಸಲು ಯಡಿಯೂರಪ್ಪಗೆ ಅವಕಾಶವೂ ಇಲ್ಲದಂತಾಗಿದೆ.
ಇದನ್ನೂ ಓದಿ: ರಾಯಚೂರು ಬಗ್ಗೆ ತೆಲಂಗಾಣ ಸಿಎಂ ಹೇಳಿಕೆ: ಬಿಜೆಪಿ ಸರ್ಕಾರದ ಮೌನ ಪ್ರಶ್ನಿಸಿದ ಕಾಂಗ್ರೆಸ್