ಬೆಂಗಳೂರು: ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ. ಜನಪರ ಆಡಳಿತ ನೀಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಶಿವಾನಂದ ವೃತ್ತ ಸಮೀಪದ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಒಂದು ವರ್ಷ ಎಂಟು ತಿಂಗಳು ಇದೆ. ಕೊರೊನಾ ಎದುರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ 4 ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ ಸಚಿವರು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ. ಕೇವಲ 35 ಸಾವಿರ ಎಂದು ಅಂಕಿ ಅಂಶ ತೋರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನಾನು ಇವತ್ತಿನವರೆಗೂ ಹುಟ್ಟುಹಬ್ಬ ಆಚರಿಸಿಲ್ಲ. ಅಭಿಮಾನಿಗಳು ಹಾರೈಸಲು ಬರುತ್ತಾರೆ. ಹಾಗಾಗಿ ಅಭಿಮಾನ ಸ್ವೀಕರಿಸುತ್ತಿದ್ದೇನೆ. ನನ್ನ ಹುಟ್ಟಿದ ದಿನಾಂಕ ಗೊತ್ತಿಲ್ಲ. ಮೇಷ್ಟ್ರು ಹಾಕಿದ ದಿನಾಂಕದಂದು ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ನಾನು 5ನೇ ತರಗತಿಗೆ ಶಾಲೆಗೆ ಸೇರಿದ್ದು. ಈ ವರ್ಷ ವಿಶೇಷವೆಂದರೆ ಸ್ವಾತಂತ್ಯ್ರ ಬಂದು 75 ವರ್ಷ. ನನಗೂ 75 ವರ್ಷ ಆಯ್ತು. ಈ 75 ವರ್ಷದಲ್ಲಿ ಸಂವಿಧಾನದ ಆಶಯ ಈಡೇರಿಲ್ಲ. ಅದರ ಬಗ್ಗೆ ಗಮನ ನಾವು ಕೊಡಬೇಕು. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಅದನ್ನು ಹೋಗಲಾಡಿಸಬೇಕು. ಬ್ರಿಟಿಷರ ವಿರುದ್ಧ ಗಾಂಧೀಜಿ ಹೋರಾಟ ಮಾಡಲಿಲ್ಲ. ದೇಶಕ್ಕೆ ಸ್ವಾತಂತ್ಯ್ರ ಸಿಗಲೆಂದು ಹೋರಾಟ ಮಾಡಿದರು. ಆ ನಿಟ್ಟಿನಲ್ಲಿ ನಮ್ಮ ಯೋಚನೆ ಇರಬೇಕು ಎಂದರು.
ಲಘುವಾಗಿ ಮಾತನಾಡಲ್ಲ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕ್ರಿಕೆಟ್ ಸ್ಟೇಡಿಯಂಗೆ ಗುಜರಾತ್ನಲ್ಲಿ ಮೋದಿ ಹೆಸರು ಇಟ್ಟಿದ್ದಾರೆ. ದೆಹಲಿಯಲ್ಲಿ ಅರುಣ್ ಜೇಟ್ಲಿ ಹೆಸರು ಇಟ್ಟಿದ್ದಾರೆ. ಯಶವಂತಪುರದಲ್ಲಿ ಉಪಾಧ್ಯಾಯ ಹೆಸರು ಇಟ್ಟಿದ್ದಾರೆ. ಹಾಗಾದರೆ ಅವರು ಹೆಸರು ಯಾಕೆ ಇಟ್ಟಿದ್ದಾರೆ?. ಅವರ ಹೆಸರಲ್ಲಿ ಹುಕ್ಕಾ ಬಾರ್ ಮಾಡಬಹುದಲ್ಲ. ಸಿ ಟಿ ರವಿ ತರಹ ನಾನು ಲಘುವಾಗಿ ಮಾತನಾಡಲ್ಲ. ಎಲ್ಲರೂ ಲಘುವಾಗಿ ಮಾತನಾಡಬಹುದು. ಆದರೆ ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಸಲಹೆ ನೀಡಿದರು.
ಮೇಕೆದಾಟು ವಿಚಾರವಾಗಿ ಭಾರತದ ಪರ ಎಂಬ ಸಿ ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿ ಟಿ ರವಿ ಕನ್ನಡಿಗರ ಪರ ಇಲ್ಲ ಅಂತ ಗೊತ್ತಾಗುತ್ತದೆ. ತಮಿಳುನಾಡು ಬಿಜೆಪಿ ಉಸ್ತುವಾರಿ ಅವರು. ಹಾಗಾಗಿ ಮಾತನಾಡುತ್ತಿದ್ದಾರೆ. ಮೇಕೆದಾಟು ನಮ್ಮ ಹಕ್ಕು, ಅದು ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಶ್ವರಪ್ಪ ಅಶ್ಲೀಲ ಪದ ಬಳಕೆ ವಿಚಾರ ಕುರಿತು ಮಾತನಾಡಿ, ಈಶ್ವರಪ್ಪಗೆ ಸಂಸ್ಕೃತಿ ಇಲ್ಲ. ಹಾಗಾಗಿ ಹಾಗೆ ಮಾತನಾಡುತ್ತಾರೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿ ಪ್ರತಿಭಟನೆ ವಿಚಾರ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸರಿಯಾಗಿ ಮಾತನಾಡುತ್ತಿದ್ದಾರೆ. ಅನುದಾನ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಹಾಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರೆ ಮಾಡಿ ಶುಭಾಶಯ ತಿಳಿಸಿದ ಜಮೀರ್:
ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಚಾಮರಾಜಪೇಟೆ ಶಾಸಕ ಜಮೀರ್ ಕರೆ ಮಾಡಿ ಶುಭಾಶಯ ಹೇಳಿದರು. ಎಲ್ಲಿದಿಯಪ್ಪ ಜಮೀರ್, ಮನೆಗೆ ಬಾ ಮಾತನಾಡೋಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್ ನಾನು ಹೈದರಾಬಾದ್ನಲ್ಲಿ ಇದ್ದೇನೆ. ನಾಳೆ ಬರುತ್ತೇನೆ ಸರ್ ಎಂದರು. ಜಮೀರ್ ಮೇಲೆ ಸಿದ್ದರಾಮಯ್ಯಗೆ ಪ್ರೀತಿ ಕಡಿಮೆಯಾಗಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯು, ಒಮ್ಮೆ ಪ್ರೀತಿ ಹುಟ್ಟಿದರೆ ಕಡಿಮೆಯಾಗಲ್ಲ. ಜಮೀರ್ ಮೇಲೆ ಪ್ರೀತಿ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ನೆಹರೂ ಕುಟುಂಬದ ಕೊಡುಗೆಗೆ ಇಡೀ ಬಿಜೆಪಿಯೇ ಸಾಟಿಯಿಲ್ಲ: ಡಿ ಕೆ ಶಿವಕುಮಾರ್