ಬೆಂಗಳೂರು : ಹಿಂದೂ ಧರ್ಮದ ಭಾಗವಾಗಿರುವ ಗೋವುಗಳ ರಕ್ಷಣೆ, ಗೋಪೂಜೆ ಕುರಿತಂತೆ ಬಿಜೆಪಿ ಹೆಚ್ಚು ಒತ್ತು ನೀಡುತ್ತಲೇ ಬಂದಿದೆ. ನಿನ್ನೆಯಷ್ಟೇ (ಮಂಗಳವಾರ) ದೀಪಾವಳಿಯ ಬಲಿಪಾಡ್ಯಮಿ ದಿನದಂದು ದೇವಸ್ಥಾನಗಳಲ್ಲಿ ಗೋಪೂಜೆ ಕಡ್ಡಾಯ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ಇದರೊಂದಿಗೆ ಇತ್ತೀಚಿನ ಬಿಜೆಪಿ ಆಡಳಿತದ ವೈಖರಿ ನೋಡಿದಾಗ, ಬಹುತೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಗೋಪೂಜೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ರಸ್ತೆ ಉದ್ಘಾಟನೆ, ಮೆಟ್ರೋ ರೈಲು ಉದ್ಘಾಟನೆ, ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಗೋಪೂಜೆಯನ್ನು ಮಾಡಲಾಗುತ್ತಿದೆ.
ಇದನ್ನೂ ಓದಿ: ದೀಪಾವಳಿಯ ಬಲಿಪಾಡ್ಯಮಿಯ ಹಬ್ಬದ ದಿನದಂದು"ಗೋಪೂಜೆ": ಸರ್ಕಾರ ಆದೇಶ
ಒಂದೆಡೆ ನಗರದಲ್ಲಿ ಎತ್ತಿನ ಬಂಡಿ ಮೂಲಕ ಪ್ರತಿಭಟನೆಗೆ ಸೀಮಿತವಾಗಿದ್ದ ಈ ಹೊಸ ಪರಿಕಲ್ಪನೆ ಈಗ ಗೋಪೂಜೆ ಮಾಡುವ ಮೂಲಕ ಹೊಸ ಆಚರಣೆಗೆ ಬಿಜೆಪಿ ನಾಂದಿ ಹಾಡುತ್ತಿದೆ.
ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಬೇಕು. ಗೋಪೂಜೆ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ. ಗೋಪೂಜೆಯಿಂದ ವಾಸ್ತುದೋಷ ಸೇರಿದಂತೆ ಅನೇಕ ಸಮಸ್ಯೆಗಳು ಪರಿಹಾರವಾಗಲಿದೆ ಎಂಬ ನಂಬಿಕೆ ಇದರ ಹಿಂದಿನ ಉದ್ದೇಶ.
ಇತ್ತೀಚೆಗೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಶಿವನಗರ ಮೇಲ್ಸೇತುವೆ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದರು. ಇದಕ್ಕೂ ಮೊದಲು ಗೋವಿನ ಪೂಜೆ ಮಾಡಿ, ಆರತಿ ಎತ್ತಿ ನಂತರ ಮೇಲ್ಸೇತುವೆಯ ರಿಬ್ಬನ್ ಕಟ್ ಮಾಡಲಾಯಿತು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳ ನಿಯಮಿತ ವತಿಯಿಂದ (ಕೆಎಂಎಫ್) ಪ್ಯಾಲೇಸ್ ಗ್ರೌಂಡ್ನಲ್ಲಿ ಹೊಸ ಯೋಜನೆಗಳು ಹಾಗೂ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಈ ವೇಳೆಯೂ ಸಭಾಂಗಣಕ್ಕೆ ಆಗಮಿಸುವ ಮೊದಲೇ ಗೋವುಗಳು, ಕರುಗಳಿಗೆ ಪೂಜೆ ಮಾಡುವ ಮೂಲಕವೇ ಕಾರ್ಯಕ್ರಮ ಆರಂಭಿಸಲಾಗಿತ್ತು.
ಮೆಟ್ರೋ ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆಯವರೆಗೂ ವಿಸ್ತರಿಸಿದ 6ಕಿ.ಮೀ ಮೆಟ್ರೋ ಮಾರ್ಗವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಉದ್ಘಾಟನೆಗೊಳಿಸಿದ್ದರು.
ಆ ದಿನ ಸಂಕ್ರಾಂತಿಯಿದ್ದ ಹಿನ್ನೆಲೆ ಸ್ಥಳೀಯ ಶಾಸಕರು, ಮಾಜಿ ಬಿಜೆಪಿ ಪಾಲಿಕೆ ಸದಸ್ಯರು ಗೋಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗೋಪೂಜೆ ನಡೆಸಿದ ಬಳಿಕವೇ ಮೆಟ್ರೋ ವಿಸ್ತರಿಸಿದ ಮಾರ್ಗವನ್ನು ಉದ್ಘಾಟಿಸಲಾಗಿತ್ತು. ಕರ್ನಾಟಕ ಗೋಹತ್ಯೆ ನಿಯಂತ್ರಣ ವಿಧೇಯಕ-2020ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕ ಹಿನ್ನೆಲೆಯಲ್ಲಿಯೂ ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಗೋಪೂಜೆ ನಡೆಸಲಾಗಿತ್ತು.
ಬಿಜೆಪಿ ಶಾಸಕ ಸುರೇಶ್ ಕುಮಾರ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿ, ಹೊಸ ಮನೆ ಕಟ್ಟಿಸಿದಾಗ ಗೋಪೂಜೆಯನ್ನು ಮಾಡುತ್ತೇವೆ. ಅದೇ ರೀತಿ ಹೊಸ ಯೋಜನೆ ಆರಂಭಿಸಿದಾಗ ಗೋಪೂಜೆ ಮಾಡಿದರೆ ಶ್ರೇಷ್ಠ ಎಂದು ಕಾರ್ಯಕರ್ತರೊಬ್ಬರು ಸಲಹೆ ನೀಡಿದರು. ಅಲ್ಲದೆ ಜನರಿಗೂ ಒಳ್ಳೆಯ ಭಾವನೆ ಮೂಡಲಿದೆ. ಹೀಗಾಗಿ, ಶಿವನಗರ ಮೇಲ್ಸೇತುವೆ ಉದ್ಘಾಟನೆಯಲ್ಲಿ ಗೋಪೂಜೆಯನ್ನು ಮಾಡಲಾಯಿತು ಎಂದರು.
ಬಹುತೇಕ ಬಿಜೆಪಿ ಮುಖಂಡರು, ನಾಯಕರಿಗೆ ಗೋಪೂಜೆ ಕುರಿತು ವಿಶೇಷ ಆಸಕ್ತಿಯಿದ್ದು, ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯಲ್ಲಿ ಗೋಪೂಜೆ ಮಾಡುತ್ತಿದ್ದಾರೆ. ಇದೀಗ ಸರ್ಕಾರವೇ ದೀಪಾವಳಿ ಹಬ್ಬಕ್ಕೆ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಗೋಪೂಜೆ ಕಡ್ಡಾಯಗೊಳಿಸಿದೆ.