ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸ್ವಲ್ಪದರಲ್ಲೇ ಅಧಿಕಾರದಿಂದ ವಂಚಿತವಾಗಿದ್ದ ಬಿಜೆಪಿ, ಈ ವರ್ಷ ಕಡೆಗೂ ತನ್ನ ಆಸೆ ಈಡೇರಿಸಿಕೊಂಡಿದೆ. ಮೈತ್ರಿ ಸರ್ಕಾರದ ಕಾಂಗ್ರೆಸ್-ಜೆಡಿಎಸ್ನ ಶಾಸಕರಲ್ಲಿ ಉಂಟಾದ ಆಂತರಿಕ ಕಲಹದಿಂದಾಗಿ 14 ತಿಂಗಳ ನಂತರ ಬಿಜೆಪಿ ಅಧಿಕಾರಕ್ಕೇರಲು ಸಾಧ್ಯವಾಗಿದೆ.
ಇಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಮೂರು ದಿನಗಳಾದರೂ ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಇತ್ತ ಸರ್ಕಾರ ರಚಿಸಲು ಮೌನಕ್ಕೆ ಶರಣಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದ್ದಕ್ಕಿದ್ದಂತೆ ಆ ಬಳಿಕ ಒಪ್ಪಿಗೆ ಸೂಚಿಸಿದರು. ಅದಕ್ಕೊಂದು ಕಾರಣವೂ ಇದೆ. ಅಂದಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಕಾಂಗ್ರೆಸ್ನ 14 ಮತ್ತು ಜೆಡಿಎಸ್ನ ಮೂವರು ಶಾಸಕರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸದೇ, ಅವರನ್ನು ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದ್ದರು.
ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ ನಂತರ, ಕೈಗೆ ಬಂದ ತುತ್ತು ಜಾರಿ ಹೋಗುತ್ತಿರುವುದನ್ನು ಅಮಿತ್ ಶಾ ಅವರ ಗಮನಕ್ಕೆ ಬಿಜೆಪಿ ನಾಯಕರ ನಿಯೋಗ ಮನವರಿಕೆ ಮಾಡಿಕೊಟ್ಟಿತ್ತು. ಹಾಗೂ ಮುಂಬೈನಲ್ಲಿದ್ದ ಅತೃಪ್ತ ಶಾಸಕರು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದೂ ಸರ್ಕಾರ ರಚನೆಗೆ ಕಾರಣ ಎಂದು ಹೇಳಬಹುದು. ಈ ಶಾಸಕರ ರಾಜೀನಾಮೆಯಿಂದಾಗಿ ಬಿಜೆಪಿ ಸರಳ ಬಹುಮತದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತೆನ್ನುವುದು ಬೆಳಕಿನಷ್ಟು ನಿಚ್ಚಳ.
ಜುಲೈ 26ರಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಾದ ಮೂರು ದಿನಗಳ ಬಳಿಕ ಬಹುಮತ ಸಾಬೀತುಪಡಿಸಿ ತಮ್ಮ ಸರ್ಕಾರ ಭದ್ರಪಡಿಸಿಕೊಂಡರು. ಅಧಿಕಾರಕ್ಕೆ ಬಂದು ಎರಡು ವಾರ ಕಳೆದರೂ ಸಚಿವ ಸಂಪುಟವನ್ನೇ ರಚಿಸದ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದವು. ಸಚಿವ ಸಂಪುಟದ ಪಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ದೆಹಲಿಯತ್ತ ಯಡಿಯೂರಪ್ಪ ಹೆಜ್ಜೆ ಹಾಕಿದರೂ ಪ್ರಯೋಜನವಾಗಿರಲಿಲ್ಲ. ಇತ್ತ ಅದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು.
ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದರಲ್ಲಿ ನಿರತರಾಗಿದ್ದ ಪರಿಣಾಮ, ರಾಜ್ಯ ಸಚಿವ ಸಂಪುಟ ರಚನೆಗೆ ಕೇಂದ್ರ ಹೆಚ್ಚು ಮನ್ನಣೆ ನೀಡಲಿಲ್ಲ. ಇದರಿಂದಾಗಿ ಯಡಿಯೂರಪ್ಪ ಅವರಿಗೆ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಿಷ್ಟೇ ಆಗಿದ್ದರೆ ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ನೂತನವಾಗಿ ಸರ್ಕಾರ ರಚನೆಯಾದ ಸಂದರ್ಭದಲ್ಲೇ ರಾಜ್ಯದಲ್ಲಿ ನೆರೆಯುಂಟಾಗಿ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿತು. ಇತ್ತ ಸಂಪುಟ ಅಸ್ತಿತ್ವಕ್ಕೆ ತರದೆ, ಸಂತ್ರಸ್ತರ ನೋವಿಗೆ ಏಕಾಂಗಿಯಾಗಿ ಹೋರಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಪಕ್ಷಗಳ ಟೀಕೆಗೆ ಗುರಿಯಾದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಏಕ ಚಕ್ರಾಧಿಪತ್ಯದಂತಾಗಿತ್ತು. ರಾಜ್ಯದಲ್ಲಿ ಸರ್ಕಾರ ಅಧಿಕಾರದಲ್ಲಿದೆ ಎಂಬ ಭಾವನೆ ಜನರಲ್ಲಿ ಇದ್ದಂತಿರಲಿಲ್ಲ.
ಇತ್ತ ರಾಜೀನಾಮೆ ನೀಡಿದ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದ್ರೆ, ಸ್ಪೀಕರ್ ರಮೇಶ್ಕುಮಾರ್ ಅವರು, ಮುಂದಿನ ಮೂರುವರೆ ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಸಚಿವ ಸ್ಥಾನ ದೊರೆಯದಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದರು. ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಈ 17 ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಹಲವು ಬಾರಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನೂ ಮುಂದೂಡುತ್ತಲೇ ಬಂದಿತ್ತು. ರಾಜ್ಯದಲ್ಲಿ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಅಂತಿಮವಾಗಿ ವಿಚಾರಣೆ ನಡೆಸಿ ಸ್ಪರ್ಧಿಸಲು ಅನುಮತಿ ನೀಡಿತು. ಅದರಲ್ಲಿ 15 ಮಂದಿ ಶಾಸಕರ ಸ್ಪರ್ಧೆಗೆ ಮಾತ್ರ ಅವಕಾಶ ನೀಡಿ ಇಬ್ಬರ ತೀರ್ಪನ್ನು ಕಾಯ್ದಿರಿಸಿದೆ. ಉಪಚುನಾವಣೆಗೆ ಸ್ಪರ್ಧಿಸಿದ ಅನರ್ಹ ಶಾಸಕರ 13 ಮಂದಿ ಮಾತ್ರ ಸ್ಪರ್ಧಿಸಿದ್ದರು. ಈ ಪೈಕಿ 11 ಮಂದಿ ಗೆಲುವಿನ ನಗೆ ಬೀರಿದರು. ಗೆದ್ದ ಶಾಸಕರೆಲ್ಲರೂ ಸಂಕ್ರಾಂತಿ ಬಳಿಕ ಸಚಿವ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಅತ್ತ ಅನರ್ಹ ಶಾಸಕರ ತೀರ್ಪು ಮುಂದೂಡತ್ತಲೇ ಇದ್ದರೆ, ಅದಕ್ಕೆ ತಲೆಕೆಡಿಸಿಕೊಳ್ಳದೆ ಸಿಎಂ ಯಡಿಯೂರಪ್ಪ, ರೈತರ ಸಾಲಮನ್ನಾ, ಮೈತ್ರಿ ಸರ್ಕಾರದ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ.ರೇವಣ್ಣ ಮಾಡಿದ್ದ ಇಂಜಿನಿಯರ್ಗಳ ವರ್ಗಾವಣೆಯನ್ನು ರದ್ದುಪಡಿಸಿದರು. ಅದೇ ರೀತಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಆದೇಶಿದರು. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಆಡಳಿತದ ಗುಂಗಿನಲ್ಲಿದ್ದ ಅಧಿಕಾರಿಶಾಹಿ ಬಿಜೆಪಿ ಆಡಳಿತಕ್ಕೆ ಹೊಂದಿಕೊಳ್ಳುವ ಗೊಂದಲವನ್ನು ಪರಿಹರಿಸಿಕೊಳ್ಳುವುದರಲ್ಲೇ ಇದೆ.