ಬೆಂಗಳೂರು: ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಜೆಡಿಎಸ್ ಸದಸ್ಯರ ಅಡ್ಡ ಮತದಾನ ಅಗತ್ಯವಿದ್ದು, ಶತಾಯ ಗತಾಯ ಒಂದೆರಡು ಸದಸ್ಯರಿಂದ ಅಡ್ಡಮತದಾನ ನಡೆಯುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಈ ಸ್ಥಾನಕ್ಕೆ ಪರಾವಲಂಬನೆ ಅಗತ್ಯವಿದೆ ಎನ್ನುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ.
ಸದ್ಯ ಬಿಜೆಪಿ ಪಕ್ಷೇತರ ಸದಸ್ಯ ನಾಗೇಶ್, ಬಿಎಸ್ಪಿಯ ಮಹೇಶ್ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ 122 ಸದಸ್ಯ ಬಲವನ್ನು ಹೊಂದಿದೆ. ಇದರಲ್ಲಿ ಇಬ್ಬರು ಅಭ್ಯರ್ಥಿಗಳು ರಾಜ್ಯಸಭೆಗೆ ಅನಾಯಾಸವಾಗಿ ಆಯ್ಕೆಯಾಗಲಿದ್ದು, ಹೆಚ್ಚುವರಿ ಮತಗಳ ಜೊತೆ ದ್ವಿತೀಯ ಪ್ರಾಶಸ್ತ್ಯ ಮತ್ತು ಅಡ್ಡಮತದಾನದ ಮೇಲೆ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಭವಿಷ್ಯ ನಿಂತಿದೆ.
ಓರ್ವ ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಅದರಂತೆ ಬಿಜೆಪಿಯ ನಿರ್ಮಲಾ ಸೀತಾರಾಮನ್ ಹಾಗು ನಟ ಜಗ್ಗೇಶ್ಗೆ ತಲಾ 45 ಮತಗಳನ್ನು ಹಾಕುವಂತೆ ಶಾಸಕರಿಗೆ ಸೂಚನೆ ನೀಡಿ ಯಾರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎನ್ನುವ ನಿರ್ದೇಶನ ನೀಡಲಾಗುತ್ತದೆ. ಇಬ್ಬರ ಅಭ್ಯರ್ಥಿಗಳಿಗೆ 90 ಮತಗಳ ಹಂಚಿಕೆಯಾದರೆ 32 ಹೆಚ್ಚುವರಿ ಮತಗಳು ಉಳಿಕೆಯಾಗಲಿವೆ. ಜೆಡಿಎಸ್ ಬಳಿ 32 ಮತಗಳಿದ್ದರೆ ಕಾಂಗ್ರೆಸ್ ಓರ್ವ ಅಭ್ಯರ್ಥಿ ಆಯ್ಕೆ ಮಾಡಿ 24 ಹೆಚ್ಚುವರಿ ಮತಗಳು ಉಳಿಕೆಯಾಗಲಿವೆ.
ಈ ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಕಾಂಗ್ರೆಸ್ನಿಂದ ಜೈರಾಮ್ ರಮೇಶ್ ಆಯ್ಕೆ ಖಚಿತವಾಗಲಿದ್ದು ನಾಲ್ಕನೇ ಸ್ಥಾನಕ್ಕೆ ಮೂರೂ ಪಕ್ಷಗಳ ಅಭ್ಯರ್ಥಿ ನಡುವೆ ಪೈಪೋಟಿ ನಡೆಯಲಿದೆ. ನಾಲ್ಕನೇ ಸ್ಥಾನಕ್ಕೆ ಯಾವ ಅಭ್ಯರ್ಥಿ ಕೂಡ 45 ಮತ ಪಡೆಯದೇ ಇದ್ದಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ.
ದ್ವಿತೀಯ ಪ್ರಾಶಸ್ತ್ಯ ಮತಗಳ ಲೆಕ್ಕಾಚಾರ: ಪ್ರತಿ ಸದಸ್ಯ ಇಬ್ಬರಿಗೆ ಮತ ಚಲಾಯಿಸಬಹುದಾಗಿದೆ. ಮೊದಲ ಪ್ರಾಶಸ್ತ್ಯ ಒಬ್ಬರಿಗೆ ದ್ವಿತೀಯ ಪ್ರಾಶಸ್ತ್ಯದ ಮತ ಒಬ್ಬರಿಗೆ ಚಲಾಯಿಸಲು ಅವಕಾಶವಿದೆ. ಅದರಂತೆ ಮೊದಲ ಪ್ರಾಶಸ್ತ್ಯದಲ್ಲಿ 45 ಮತ ಬಾರದೇ ಇದ್ದಲ್ಲಿ ಆಗ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಗುತ್ತದೆ. ಪ್ರಥಮ ಪ್ರಾಶಸ್ತ್ಯದಲ್ಲಿ ಮೊದಲೆರಡು ಸ್ಥಾನ ಪಡೆದ ಅಭ್ಯರ್ಥಿ ಉಳಿಸಿಕೊಂಡು ಉಳಿದ ಅಭ್ಯರ್ಥಿಗಳನ್ನು ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯದಿಂದ ಹೊರಗಿಡಲಾಗುತ್ತದೆ. ಅದರಂತೆ 32 ಮತ ಹೊಂದಿರುವ ಬಿಜೆಪಿಯ ಲೆಹರ್ ಸಿಂಗ್, ಜೆಡಿಎಸ್ನ ಕುಪೇಂದ್ರ ರೆಡ್ಡಿ ಕಣದಲ್ಲಿ ಉಳಿಯಲಿದ್ದು, ಕಾಂಗ್ರೆಸ್ ನ ಮನ್ಸೂರ್ ಅಲಿ ಖಾನ್ ಹೊರಗುಳಿಯಲಿದ್ದಾರೆ.
ಅಡ್ದ ಮತದಿಂದ ಸರಳ ಗೆಲುವಿನ ಲೆಕ್ಕಾಚಾರ: ನಂತರ ಇಬ್ಬರು ಅಭ್ಯರ್ಥಿಗಳ ದ್ವಿತೀಯ ಪ್ರಾಶಸ್ತ್ಯದ ಮತಗಳ ಕಾರ್ಯ ನಡೆಸಲಾಗುತ್ತದೆ. ಬಿಜೆಪಿ ಬಳಿ 90 ದ್ವಿತೀಯ ಪ್ರಾಶಸ್ತ್ಯ ಮತಗಳಿದ್ದರೆ ಜೆಡಿಎಸ್ ಬಳಿ ದ್ವಿತೀಯ ಪ್ರಾಶಸ್ತ್ಯ ಮತಗಳಿಲ್ಲ. ಹಾಗಾಗಿ ಒಂದೆರಡು ಅಡ್ಡಮತದಾನ ನಡೆದರೂ ಬಿಜೆಪಿಗಿಂತ ಪ್ರಥಮ ಪ್ರಾಶಸ್ತ್ಯದ ಮತಗಳ ಸಂಖ್ಯೆ ಕಡಿಮೆಯಾದಲ್ಲಿ ಗೆಲುವು ಮತ್ತಷ್ಟು ಸರಳವಾಗಲಿದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.
ಆದರೆ ಈ ಲೆಕ್ಕಾಚಾರ ನಡೆಯಬೇಕಾದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಮೈತ್ರಿ ನಡೆಯಬಾರದು. ಒಂದು ವೇಳೆ ಮೈತ್ರಿ ಆದಲ್ಲಿ ಅಥವಾ ಓರ್ವ ಅಭ್ಯರ್ಥಿ ಕಣದಿಂದ ಹಿಂದೆ ಸರಿದಲ್ಲಿ ಈ ಲೆಕ್ಕಾಚಾರ ತಲೆಕೆಳಗಾಗಲಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ದ್ವಿತೀಯ ಪ್ರಾಶಸ್ತ್ಯ ಮತ ಮತ್ತು ಅಡ್ಡ ಮತದಾನ ಅನಿವಾರ್ಯವಾಗಿದ್ದು, ಮೈತ್ರಿಯಾಗದೇ ಇದ್ದಲ್ಲಿ ಬಿಜೆಪಿಗೆ ಮೂರನೇ ಸ್ಥಾನ ಖಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: 4 ನೇ ಸ್ಥಾನಕ್ಕಾಗಿ ಮೂರೂ ಪಕ್ಷಗಳ ನಡುವೆ ಪೈಪೋಟಿ