ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮೃತ ಪ್ರವೀಣ್ ಕುಟುಂಬಕ್ಕೆ ಪಕ್ಷದ ವತಿಯಿಂದ ಪಕ್ಷದ ರಾಜ್ಯಾಧ್ಯಕ್ಷರು 25 ಲಕ್ಷ ರೂ. ಪರಿಹಾರ ರೂಪದಲ್ಲಿ ಕೊಡಲಿದ್ದಾರೆ. ಮೃತರ ಮನೆಯ ಕನಸನ್ನು ನನಸಾಗಿಸುವ ನಿರ್ಧಾರವನ್ನು ಪಕ್ಷದ ರಾಜ್ಯಾಧ್ಯಕ್ಷರು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರು, ಸಚಿವರು, ಶಾಸಕರು ಪ್ರವೀಣ್ ಅವರ ಮನೆಗೆ ಇಂದು ಭೇಟಿ ಕೊಡಲಿದ್ದಾರೆ. ಹತ್ಯೆ ಹಿಂದಿನ ಕೈವಾಡವನ್ನು ಕಂಡುಹಿಡಿಯಬೇಕು. ಕೇರಳದವರ ಪಾತ್ರ ಇದರಲ್ಲಿ ಇದೆಯೇ ಎಂಬ ತನಿಖೆ ನಡೆಯಬೇಕಿದೆ. ಅಗತ್ಯವಿದ್ದರೆ ಇದನ್ನು ಎನ್‍ಐಎ ಮೂಲಕ ತನಿಖೆ ಮಾಡಿಸಲು ಕೋರುವುದಾಗಿ ಹೇಳಿದರು.
ಹರ್ಷ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಗಲಭೆಯ ಆರೋಪಿಗಳನ್ನೂ ಬಂಧಿಸಲಾಗಿದೆ. 2020ರ ಡಿ.ಜೆ.ಹಳ್ಳಿ- ಕೆ.ಜಿ ಹಳ್ಳಿ ಗಲಭೆ ಆರೋಪಿಗಳನ್ನೂ ಕೂಡಲೇ ಬಂಧಿಸಲಾಗಿದೆ. ಚುನಾವಣೆ ವೇಳೆ ಕೋಮುಗಲಭೆ ಹಬ್ಬಿಸುವುದು ಮತ್ತು ಇದರಲ್ಲಿ ಜಿಹಾದಿ ಶಕ್ತಿಗಳು ಒಳಗೊಳ್ಳುವುದನ್ನು ಗಮನಿಸಿದ್ದು, ಇಂಥ ಶಕ್ತಿಗಳನ್ನು ಸರ್ಕಾರವು ನಿರ್ದಾಕ್ಷಿಣ್ಯವಾಗಿ ದಮನ ಮಾಡಲಿದೆ. ಈ ಪ್ರಕರಣದಲ್ಲೂ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ತಂಡ ತನಿಖೆ ಮಾಡುತ್ತಿದೆ. ಶಾಂತಿ ಕಾಪಾಡಲು ಮುಖ್ಯಮಂತ್ರಿಗಳೂ ಮನವಿ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸುಮಾರು 20ಕ್ಕೂ ಹೆಚ್ಚು ಕೊಲೆಗಳಾದವು. ಸರಿಯಾದ ತನಿಖೆ ನಡೆಸಲಿಲ್ಲ. ಆರೋಪಿಗಳನ್ನು ಬಂಧಿಸಲಿಲ್ಲ. ನಮ್ಮ ಸರ್ಕಾರವು ಸಮರ್ಪಕ ತನಿಖೆ ಮಾಡಿ ಕೂಡಲೇ ಆರೋಪಿಗಳನ್ನು ಬಂಧಿಸಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಸೇರಿದಂತೆ ಎಲ್ಲ ಪ್ರಕರಣಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, ಘಟನೆ ಹಿಂದಿರುವ ದೊಡ್ಡದಾದ ಜಿಹಾದಿ ಮಾನಸಿಕತೆಯನ್ನು ನಾವೆಲ್ಲರೂ ಸೇರಿ ದೃಢವಾಗಿ ಮಟ್ಟ ಹಾಕಬೇಕಿದೆ. ಪ್ರವೀಣ್ ಬಲಿದಾನವನ್ನು ವ್ಯರ್ಥವಾಗಲು ಬಿಜೆಪಿ ಬಿಡುವುದಿಲ್ಲ. ಆ ಬಲಿದಾನದ ಮೂಲಕ ಈ ದೇಶವನ್ನು ಪೆಡಂಭೂತವಾಗಿ ಕಾಡುತ್ತಿರುವ ಜಿಹಾದಿ ಮಾನಸಿಕ ಶಕ್ತಿಯನ್ನು ದಮನ ಮಾಡುವುದೇ ಬಿಜೆಪಿಯ ಅತ್ಯಂತ ದೊಡ್ಡದಾದ ಕಾರ್ಯ ಎಂದು ತಿಳಿಸಿದರು.
ಸಿದ್ದರಾಮಯ್ಯರ ಅವಧಿಯಲ್ಲಿ ಎಸ್‍ಡಿಪಿಐ ಮತ್ತು ಪಿಎಫ್‍ಐ ಮೇಲಿದ್ದ ಸಾವಿರಾರು ಪ್ರಕರಣಗಳನ್ನು ರದ್ದು ಮಾಡಿದ್ದಲ್ಲದೆ, ಈ ಪಕ್ಷಗಳ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಅವರು ಟೀಕಿಸಿದರು. ಎಸ್‍ಡಿಪಿಐ ಮತ್ತು ಪಿಎಫ್‍ಐ ನಿಷೇಧಕ್ಕೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಗೃಹ ಖಾತೆಗೆ ನೀಡಲು ನಮ್ಮ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದೂ ವಿವರಿಸಿದರು.
(ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ಮೇಲೆ 66 ಕೋಮು ದಳ್ಳುರಿ ಕೇಸ್: ಆರೋಪಿಗಳಿಗೆ ಶಿಕ್ಷೆ ಮಾತ್ರ ಶೂನ್ಯ!)