ಬೆಂಗಳೂರು: ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಸಲು ಮಂಗಳವಾರ ವಿಧಾನಪರಿಷತ್ ಸದನ ನಡೆಸುವಂತೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಅವರು ಅನುಮತಿ ನೀಡುವ ವಿಶ್ವಾಸವಿದೆ ಎಂದು ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ ಸಭಾಪತಿ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ರಾಜಭವನದ ಕದ ತಟ್ಟಿದೆ. ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸರ್ಕಾರದ ಮುಖ್ಯ ಸಚೇತಕ. ಮಹಾಂತೇಶ್ ಕವಟಗಿಮಠ, ಅಯನೂರು ಮಂಜುನಾಥ್, ತೇಜಸ್ವಿ ಗೌಡ ನೇತೃತ್ವದ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ವಜುಭಾಯ್ ವಾಲಾ ಜೊತೆ ಸಮಾಲೋಚನೆ ನಡೆಸಿತು.
ವಿಧಾನ ಪರಿಷತ್ ಕಲಾಪ ಮುಂದೂಡಿಕೆ ಮಾಡಿದ ಸಂದರ್ಭವನ್ನು ವಿವರಿಸಿದರು. ಸಭಾಪತಿ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಅದರ ಚರ್ಚೆಗೆ ಅವಕಾಶ ನೀಡದೆ ಕಲಾಪ ಮುಂದೂಡಲಾಗಿದೆ. ಇದರಲ್ಲಿ ಮಧ್ಯಪ್ರವೇಶ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿ ಮಂಗಳವಾರ ಸದನ ಕರೆಯುವಂತೆ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ.
ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಭಾಪತಿಗಳು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಗೆ ವಿರುದ್ದವಾಗಿ ಕಲಾಪ ಮುಂದೂಡಿಕೆ ಮಾಡಿರುವ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದು ಮಂಗಳವಾರ ಸದನ ಕರೆಯುವಂತೆ ಮನವಿ ಮಾಡಿದ್ದೇವೆ, ರಾಜ್ಯಪಾಲರು ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಡಿಸೆಂಬರ್ 15ರವರೆಗೆ ಕಾರ್ಯಕಲಾಪ ಇದ್ದರೂ ಕೂಡ ಕಲಾಪವನ್ನು ಅನಿರೀಕ್ಷಿತವಾಗಿ ಸರ್ಕಾರದ ಮತ್ತು ಸದಸ್ಯರ ಭಾವನೆಗೆ ವಿರುದ್ದವಾಗಿ ಸಭಾಪತಿಗಳು ಮುಂದೂಡಿಕೆ ಮಾಡಿದ್ದಾರೆ. ಈ ಹಿನ್ನೆಲೆ ಕಾರ್ಯಕಲಾಪದಲ್ಲಿ ಇದ್ದ ಕೆಲ ಕಾರ್ಯಕ್ರಮಗಳು ಹಾಗೂ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವ ಸೂಚನೆ ಎಲ್ಲವೂ ಕೂಡ ವಿಧಾನಪರಿಷತ್ತಿನಲ್ಲಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹಾಗಾಗಿ ಮಂಗಳವಾರ ಕಲಾಪ ಕರೆಯುವಂತೆ ನಿರ್ದೇಶನ ನೀಡಲು ಕೋರಿದ್ದೇವೆ ಎಂದರು.
ನಮ್ಮ ಮನವಿಗೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಸೂಕ್ತವಾದ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಡಿಸೆಂಬರ್ 15ರ ಮಂಗಳವಾರ ಮತ್ತೊಂದು ಸದನ ಕರೆಯುವ ನಿರ್ದೇಶನ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಬಿಎಸಿ ನಿರ್ಧಾರ ಪ್ರಕಟಿಸದ ಸಭಾಪತಿ ನಡೆ ರಾಜ್ಯಪಾಲರ ಗಮನಕ್ಕೆ: ಮಂಗಳವಾರ ಮತ್ತೆ ಕಲಾಪ ಕರೆಯಬೇಕು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಬೇಕು ಎನ್ನುವ ಸೂಚನೆ ಸರ್ಕಾರದ ವತಿಯಿಂದ ಬರಲಾಗಿದೆ. ಬಿಎಸಿ ಕಾರ್ಯಕಲಾಪ ಸಮಿತಿ ಸಭೆಯ ತೀರ್ಮಾನ ಮುಂದುವರಿಸಬೇಕು ಎನ್ನುವ ತೀರ್ಮಾನ ಮಾಡಿತ್ತು. ಈ ಬಗ್ಗೆಯೂ ಕ್ರಮ ಕೈಗೊಳ್ಳದಿರುವ ಬಗ್ಗೆ ರಾಜ್ಯಪಾಲರಿಗೆ ನಾವು ಮನವರಿಕೆ ಮಾಡಿದ್ದೇವೆ. ಅಲ್ಲದೆ ಸದನದ ಕಾರ್ಯಕಲಾಪ ನಿರ್ಧಾರವನ್ನು ಸದನದಲ್ಲಿ ಮಂಡಿಸದೇ ಇರುವುದನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದರು.
ಎಂಎಲ್ಸಿಗಳ ಪರೇಡ್ ರದ್ದು:
ರಾಜ್ಯಪಾಲರ ಮುಂದೆ ಬಿಜೆಪಿ ಪರಿಷತ್ ಸದಸ್ಯರ ಪರೇಡ್ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ರಾಜ್ಯಪಾಲರ ಅನುಮತಿ ದೊರೆಯಲಿಲ್ಲ, ನಿಯೋಗದಲ್ಲಿ ಬಂದು ಚರ್ಚಿಸಲು ಸೂಚನೆ ಕಳಿಸಲಾಯಿತು. ಈ ಹಿನ್ನೆಲೆ ಪರೇಡ್ ನಿರ್ಧಾರ ಬಿಟ್ಟು ಐವರ ನಿಯೋಗ ಮಾತ್ರ ಭೇಟಿ ನೀಡಿತು.