ಬೆಂಗಳೂರು: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಪ್ರಮುಖ ಆರೋಪಿ, ಮೃತರ ಪತ್ನಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.
ಉಡುಪಿ ಸೆಷನ್ಸ್ ಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದು ಕೋರಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಇ.ಎಸ್ ಇಂದಿರೇಶ್ ಅವರಿದ್ಧ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ:
2016ರ ಜುಲೈ 28ರಂದು ಉದ್ಯಮಿ ಭಾಸ್ಕರ್ ಶೆಟ್ಟಿ ಉಡುಪಿ ನಿವಾಸದಿಂದ ನಾಪತ್ತೆಯಾಗಿದ್ದರು. 8 ದಿನಗಳ ಬಳಿಕ ಮಣಿಪಾಲ ಪೊಲೀಸರು ಅನುಮಾನಗೊಂಡು ಭಾಸ್ಕರ್ ಶೆಟ್ಟಿ ಪತ್ನಿ ಹಾಗೂ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ಉಡುಪಿ ಪ್ರಧಾನ ಜಿಲ್ಲಾ ನ್ಯಾಯಾಲಯ ಆರೋಪಿ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
(ಇದನ್ನೂ ಓದಿ: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ.. ಪತ್ನಿ, ಆಕೆಯ ಗೆಳೆಯ, ಪುತ್ರನಿಗೆ ಜೀವಾವಧಿ ಶಿಕ್ಷೆ)
ಈ ಶಿಕ್ಷೆ ರದ್ದುಪಡಿಸುವಂತೆ ಹಾಗೂ ಜಾಮೀನು ನೀಡುವಂತೆ ಹೈಕೋರ್ಟ್ಗೆ ರಾಜೇಶ್ವರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ವಕೀಲ ಹಸ್ಮತ್ ಪಾಷಾ ಹೋಮಕುಂಡದಲ್ಲಿ ಭಾಸ್ಕರ್ ಶೆಟ್ಟಿ ಅವರನ್ನು ಸುಟ್ಟು ಕೊಲೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಆದರೆ, ಹೋಮಕುಂಡದಲ್ಲಿ ಮೃತದೇಹ ಸಿಕ್ಕಿಲ್ಲ. ಡಿಎನ್ಎ ಪರೀಕ್ಷೆಯ ವಿಶ್ಲೇಷಣೆಯೂ ಸೂಕ್ತ ರೀತಿಯಲ್ಲಿ ಇಲ್ಲ. ಪತಿ ಭಾಸ್ಕರ್ ಅವರನ್ನು ರಾಜೇಶ್ವರಿಯೇ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಇವುಗಳನ್ನು ಪರಿಗಣಿಸದೇ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಕ್ರಮ ಸರಿಯಲ್ಲ. ಆದ್ದರಿಂದ ಶಿಕ್ಷೆ ಅಮಾನತಿನಲ್ಲಿ ಇರಿಸಿ, ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಪೀಠ, ಆರೋಪಿ ರಾಜೇಶ್ವರಿ ಅವರಿಗೆ ಜಾಮೀನು ನೀಡಿ ಆದೇಶಿಸಿದೆ.
(ಇದನ್ನೂ ಓದಿ: ಸುದೀರ್ಘ ಅವಧಿಯ ಬಳಿಕ ವಕೀಲ ವೃತ್ತಿಗೆ ಮರಳಿದ ಮಾಜಿ ಸಂಸದ ಮುದ್ದಹನುಮೇಗೌಡ)