ಬೆಂಗಳೂರು: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8ರಂದು ಕಾರ್ಮಿಕ ಪರ ಸಂಘಟನೆಗಳು ನೀಡಿರುವ ಭಾರತ್ ಬಂದ್ಗೆ ಬೆಂಗಳೂರು ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.
ಭಾರತ್ ಬಂದ್ ಕುರಿತಂತೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ಒಂದು ವೇಳೆ ಮೆರವಣಿಗೆಗಾಗಿ ಅನುಮತಿ ಯಾರಾದರೂ ಬಂದರೆ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಪಪಡಿಸಿದ್ದಾರೆ.
ಕೆಲ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಕಚೇರಿಗೆ ಬಂದಿದ್ದರು. ಆದರೆ, ನಾವು ಮೆರವಣಿಗೆ ಮಾಡಲು ಅನುಮತಿ ಕೊಡುವುದಿಲ್ಲ ಎಂದು ಹೇಳಿ ಕಳಿಸಿದ್ದೇವೆ. ಅವರು ಏನೇ ಮಾಡುವುದಿದ್ದರೂ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಡಬೇಕು ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ದಿನ ಬೆಳಗಾದರೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತದೆ. ಸಂಘಟನೆಗಳ ಮೆರವಣಿಗೆ ಮಾಡಿ ಲಕ್ಷಾಂತರ ಜನಕ್ಕೆ ತೊಂದರೆ ನೀಡಲು ಬಿಡುವುದಿಲ್ಲ. ಒಂದು ವೇಳೆ ಬಂದ್ ಮಾಡಿದರೆ ಆಯೋಜಕರೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಷರತ್ತುಗಳಿವೆ. ಏನೇ ಸಣ್ಣ ಘಟನಯಾದರೂ ಆಯೋಜಕರ ಮೇಲೆ ಪ್ರಕರಣ ದಾಖಲಿಸುತ್ತೇವೆ. ಏನೇ ಅನಾಹುತವಾದರೂ ಅವರೇ ಅದಕ್ಕೆ ಜವಾಬ್ದಾರರು ಎಂದರು.