ಬೆಂಗಳೂರು: ವ್ಯಕ್ತಿಯೋರ್ವ ವೇಗವಾಗಿ ಬೆಂಜ್ ಕಾರು ಚಲಾಯಿಸಿದ ಪರಿಣಾಮ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿರುವ ಘಟನೆ ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಹಲಸೂರು ಟ್ರಾಫಿಕ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಅಸಲಿಯತ್ತು ಬಯಲಾಗಿದೆ. ಸಣ್ಣ ಅಪಘಾತದಿಂದ ತಪ್ಪಿಸಿಕೊಳ್ಳಲು ಹೋದ ಕಾರು ಚಾಲಕ ಸುವೀದ್ ಭಯದಲ್ಲಿ ದೊಡ್ಡ ಅನಾಹುತ ಮಾಡಿದ್ದಾನೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ.
ವೇಗವಾಗಿ ಬೆಂಜ್ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ಹೊಡೆದ ಪರಿಣಾಮ ಮುಂದಿನ ಎರಡು ಆಟೋ ಹಾಗೂ ಒಂದು ಮಿನಿ ಲಾರಿ ಮಧ್ಯೆ ಅಪಘಾತವಾಗಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿತ್ತು. ಬೆಂಜ್ ಕಾರನ್ನು ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು. ಹಲಸೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆಯಲ್ಲಿ ಕಂಡುಬಂದ ಅಂಶ:
ಮೊದಲು ಇಂದಿರಾನಗರ ಸಿಎಂಎಸ್ ಆಸ್ಪತ್ರೆ ಬಳಿ ಬೆಂಜ್ ಕಾರ್ ಚಾಲಕ ಬೈಕ್ಗೆ ಗುದ್ದಿದ್ದರು. ಗುದ್ದಿದ ರಭಸಕ್ಕೆ ಬೈಕ್ ಸವಾರ ಹಾರಿ ಕೆಳಗೆ ಬಿದ್ದಿದ್ದ. ಆದರೆ ಹೆಚ್ಚು ಗಾಯವಾಗದೇ ಪ್ರಾಣಾಪಾಯದಿಂದ ಪಾರಾಗಿದ್ದರು. ಅದರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕ ಸುವೀದ್ ಅತಿ ವೇಗವಾಗಿ ಕಾರನ್ನು ಚಲಾಯಿಸಿದ್ದಾರೆ. ಅದೇ ಭಯದಲ್ಲಿ ಸ್ಪೀಡ್ ಅಗಿ ಬಂದ ಬೆಂಜ್ ಕಾರ್ನಿಂದ ಸರಣಿ ಅಪಘಾತ ಸಂಭವಿಸಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕಮಲ್ ಪಂತ್ ಪ್ರತಿಕ್ರಿಯೆ:
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಬೆಂಜ್ ಕಾರ್ ಚಾಲಕ ಆಸ್ಪತ್ರೆಯಲ್ಲಿದ್ದು, ಹೇಳಿಕೆ ಕೊಡುವ ಸ್ಥಿತಿಯಲ್ಲಿ ಅವರಿಲ್ಲ. ಅವರು ಡಿಸ್ಚಾರ್ಜ್ ಆದ ಬಳಿಕ ವಿಚಾರ ಗೊತ್ತಾಗಬೇಕಿದೆ. ರಕ್ತದ ಮಾದರಿಯನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಏನು ವರದಿ ಬರುತ್ತದೋ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಜ್ ಕಾರಿನ ಓವರ್ ಸ್ಪೀಡ್.. ಬೆಂಗಳೂರಿನಲ್ಲಿ ಸರಣಿ ಅಪಘಾತ.. CCTV VIDEO