ಬೆಂಗಳೂರು: 5ಜಿ ಅಂದರೆ ಅತಿವೇಗದ ಅಂತರ್ಜಾಲ ಸಂಪರ್ಕ ಮಾತ್ರವಲ್ಲ. ಅದು ಭಾರಿ ಸಂಖ್ಯೆಯ ಯಂತ್ರಗಳ ನಡುವೆ ಅತ್ಯಂತ ನಂಬಿಕಾರ್ಹವಾಗಿ ಹಾಗೂ ವಿಳಂಬಕ್ಕೆ ಎಡೆ ಇಲ್ಲದಂತೆ ಸಂವಹನವನ್ನು ಸಾಧ್ಯವಾಗಿಸುವ ಸಾಧನ. ಈ ವ್ಯವಸ್ಥೆಯಲ್ಲಿ ತಂತಿಗಳ ಮೂಲಕ ನೀಡುವ ಸಂಪರ್ಕಗಳಿಗಿಂತ ಹೆಚ್ಚು ಕಾರ್ಯಕ್ಷಮತೆ ನೋಡುವುದು ಸಾಧ್ಯವಾಗಬಹುದು ಎಂದು ಕಿಂಡ್ರಿಲ್ ಸಂಸ್ಥೆಯ ತಂತ್ರಜ್ಞ ಬೆಂಜಮಿನ್ ಬ್ರಿಲಾಟ್ ಹೇಳಿದ್ದಾರೆ.
ಬೆಂಗಳೂರು ಟೆಕ್ ಶೃಂಗದಲ್ಲಿ (Bengaluru Tech Summit-2021) ಮೊದಲ ದಿನ ಆಯೋಜಿಸಿದ್ದ ಗೈನಿಂಗ್ ಆನ್ ಎಡ್ಜ್ ವಿಥ್ 5ಜಿ ವಿದ್ವತ್ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಲ ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಿಂದ ಪಾರಾಗಲು ಉದ್ಯಮಗಳು 5ಜಿ ಮತ್ತು ಎಡ್ಜ್ ಕಂಪ್ಯೂಟಿಂಗ್ (Edge computing ) ಬಳಸಲಿವೆ ಎಂದರು.
ಇನ್ನು 5 ಜಿ ಕಾಲ
ಸೆನ್ಸರ್‌ಗಳನ್ನು, ಆಗ್ಮೆಂಟೆಡ್ ರಿಯಾಲಿಟಿ, ಐಒಟಿಯಂತಹ ತಂತ್ರಜ್ಞಾನಗಳನ್ನು ಇನ್ನಷ್ಟು ವ್ಯಾಪಕವಾಗಿ ಬಳಸುವ ಮೂಲಕ ಮುಂದಿನ ದಿನಗಳಲ್ಲಿ ಕಾರ್ಖಾನೆಗಳು 5ಜಿ ಕಾರ್ಖಾನೆಗಳಾಗಲಿವೆ. ನಿಸ್ತಂತು ಜಾಲಗಳು ಈ ಹಿಂದೆ ತಲುಪದಿದ್ದ ಪ್ರದೇಶಗಳಲ್ಲೂ 5ಜಿ ತಂತ್ರಜ್ಞಾನ ಅತ್ಯುತ್ತಮ ಗುಣಮಟ್ಟದ ಸಂಪರ್ಕವನ್ನು ಒದಗಿಸಲಿದೆ ಎಂದು ವಿವರಿಸಿದರು.
ವಿಸ್ತಾರ ಸಂಸ್ಥೆಯ ಸಿಐಒ ವಿನೋದ್ ಭಟ್, ಟೆಲ್‌ಸ್ಟ್ರಾದ ಸುನಿಲ್ ಮೆನನ್, ಏರ್‌ಟೆಲ್‌ನ ಅಲೋಕ್ ಶುಕ್ಲಾ, ವಿರೆಸೆಂಟ್ ಇನ್‌ಫ್ರಾಸ್ಟ್ರಕ್ಚರ್‌ನ ಕುಶಾಲ್ ವರ್ಷ್ನೆ, ಕಿಂಡ್ರಿಲ್‌ನ ಸಂಜಯ್ ಸಾಹಿನಿ ಸೇರಿದಂತೆ ಹಲವು ಪರಿಣತರು ಈ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಭಾರತದ ಅರ್ಥವ್ಯವಸ್ಥೆಯಲ್ಲಿ ಈಗಾಗಲೇ ಗಮನಾರ್ಹ ಪಾತ್ರ ವಹಿಸುತ್ತಿರುವ ದೂರಸಂಪರ್ಕ ಕ್ಷೇತ್ರವು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. 5ಜಿ ಸೇವೆಗಳು ಈ ಪೈಕಿ ಹಲವು ಬದಲಾವಣೆಗಳಿಗೆ ಕಾರಣವಾಗಲಿವೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಉದ್ಯಮಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ
ಅಭೂತಪೂರ್ವ ವೇಗದಲ್ಲಿ ಸಂವಹನ ಸಾಧ್ಯವಾಗಿಸುವ 5ಜಿ ತಂತ್ರಜ್ಞಾನದ ಅನುಕೂಲತೆಗಳನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಕೆಲಸ ನಡೆದಿದ್ದು, ಈ ಸಂದರ್ಭ ನಾವೆಲ್ಲರೂ ಸಂಭ್ರಮಿಸುವಂತಹ ಸಂದರ್ಭವಾಗಿದೆ ಎಂದು ಸಂಜಯ್ ಸಾಹಿನಿ ಹೇಳಿದರು. ಅಲೋಕ್ ಶುಕ್ಲಾ ಮಾತನಾಡಿ, ಉದ್ಯಮಗಳಲ್ಲಿ ಈ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದು ಸರಿಯಾದ ಸಂದರ್ಭ ಎಂದರು.
ಹಲವು ತಂತ್ರಜ್ಞಾನಗಳ ಒಗ್ಗೂಡುವಿಕೆಯಿಂದ ವಿಕಸನಗೊಳ್ಳುತ್ತಿರುವ 5ಜಿ ತಂತ್ರಜ್ಞಾನವನ್ನು ನಿಜಕ್ಕೂ ಒಂದು ಪರ್‌ಫೆಕ್ಟ್ ಸ್ಟಾರ್ಮ್ ಎಂದು ಕರೆಯಬಹುದು, ಗೇಮಿಂಗ್ ಉದ್ಯಮದಿಂದ ಪ್ರಾರಂಭಿಸಿ ವಾಹನೋದ್ಯಮದವರೆಗೆ ಪ್ರತಿ ಕ್ಷೇತ್ರದಲ್ಲೂ ಬದಲಾವಣೆಗಳನ್ನು ತರಲು ಅದು ಸಜ್ಜಾಗುತ್ತಿದೆ ಎಂದು ಟೆಲ್‌ಸ್ಟ್ರಾದ ಸುನಿಲ್ ಮೆನನ್ ಅಭಿಪ್ರಾಯಪಟ್ಟರು.