ಬೆಂಗಳೂರು: ನಗರದಲ್ಲಿ ಇತ್ತೀಚಿಗೆ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ. ಬೆಳ್ಳಂಬೆಳಗ್ಗೆ ಇಲ್ಲವೇ ಸಂಜೆಯಾದ್ರೆ ಸಾಕು ಮೀಸೆ ಚಿಗುರದ ಹುಡುಗರು ಬೈಕ್ ಏರಿ ಕರಾಮತ್ತು ನಡೆಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಯುವಕರಂತೂ ಲೈಕ್ಸ್ಗಾಗಿ ಅಡ್ಡದಾರಿ ಹಿಡಿದಿದ್ದಾರೆ. ಇಂಥವರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದು ನಗರ ಸಂಚಾರಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಕಳೆದ ವಾರ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ 14 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಗಮನಿಸಿ 12 ಕೇಸು ಹಾಕಿದ್ದಾರೆ. ವ್ಹೀಲಿಂಗ್ ಮಾಡುವವರ ವಿರುದ್ಧ ಐಪಿಸಿ ಭದ್ರತಾ ಕಲಂ 107 ಪ್ರಕರಣದಡಿ ಪ್ರಕರಣ ದಾಖಲಿಸಲಾಗುತ್ತಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರಿಂದ ಬೈಕ್ ವ್ಹೀಲಿಂಗ್
ಈಗಾಗಲೇ ಪಿಯು ಕಾಲೇಜು ತರಗತಿಗಳು ಕೂಡ ಆರಂಭವಾಗಿವೆ. ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ 18 ವರ್ಷ ಆಗಿರಲ್ಲ. ಹಾಗಾಗಿ ಕಾಲೇಜಿಗೆ ಬೈಕ್ ತರುವಂತಿಲ್ಲ. ಈ ವಯಸ್ಸಿಗೆ ಡಿಎಲ್ ಕೂಡ ಅವರಿಗೆ ಸಿಕ್ಕಿರುವುದಿಲ್ಲ. ಕಾಲೇಜು ಆಡಳಿತ ಮಂಡಳಿಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬೈಕ್ ತರದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿರುವುದಾಗಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದರು.