ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಐಟಿ ದಾಳಿಯ ಬಳಿಕ ಈಗ ತೆರಿಗೆ ವಂಚಕರಿಗೆ ಜಾರಿ ನಿರ್ದೇಶನಾಲಯದ ಭಯ ಆರಂಭವಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಆರಂಭವಾಗಿದ್ದ ಐಟಿ ದಾಳಿ ಇಂದೂ ಕೂಡ ಮುಂದುವರೆಯಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಬಿಎಸ್ವೈ ಆಪ್ತ ಉಮೇಶ್, ಚಾರ್ಟೆಡ್ ಅಕೌಂಟೆಂಟ್ಗಳು ಹಾಗೂ ಕಾಂಟ್ರಾಕ್ಟರ್ಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಪತ್ತೆಯಾಗಿದೆ. ಇವರು ಪಿಎಂಎಲ್ಎ ಕಾಯ್ದೆಯನ್ನು ಉಲ್ಲಂಘಿಸಿರುವುದು ಐಟಿ ದಾಳಿಯ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗ್ತಿದೆ.
ತೆರಿಗೆ ವಂಚನೆ ಜೊತೆ ಜೊತೆಗೆ ಅಕ್ರಮ ಹಣ ಮತ್ತು ಸಂಪತ್ತು ಸಂಗ್ರಹಿಸಿರುವ ಹಲವು ಕಾಂಟ್ರಾಕ್ಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಶೀಘ್ರವೇ ಐಟಿಯಿಂದ ಜಾರಿ ನಿರ್ದೇಶನಾಲಯಕ್ಕೆ ಪತ್ರ ರವಾನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ಕಾಂಟ್ರಾಕ್ಟರ್ಗಳಿಗೆ ಜಾರಿ ನಿರ್ದೇಶನಾಲಯದ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.
ಉಮೇಶ್ ಆಪ್ತ ಸೋಮಶೇಖರ್ ಮನೆಯನ್ನು ಜಾಲಾಡಿ ಕಡತಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಸೋಮಶೇಖರ್ ಮನೆಯಲ್ಲೇ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು ಎನ್ನುವ ಮಾಹಿತಿ ದೊರೆತಿದೆ.
ಉಮೇಶ್ಗೆ ಅತ್ಯಾಪ್ತನಾಗಿದ್ದ ಕ್ಲಾಸ್ 1 ಗುತ್ತಿಗೆದಾರ ಸೋಮಶೇಖರ್ ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್ಗಳನ್ನು ಪಡೆಯುತ್ತಿದ್ದ. ಇಬ್ಬರ ನಡುವೆ ಹಲವು ಅಕ್ರಮ ವ್ಯವಹಾರಗಳು ನಡೆದಿರುವ ಬಗ್ಗೆ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಸೋಮಶೇಖರ್ ಬ್ಯಾಂಕ್ ಪಾಸ್ ಬುಕ್ ಸೇರಿ ಹಲವು ದಾಖಲೆಗಳ ಪರಿಶೀಲನೆಯನ್ನು ಇದೀಗ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮತ್ತೊಮ್ಮೆ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾ ಸರ್ವರ್ ಡೌನ್!