ಬೆಂಗಳೂರು: ಎರಡನೇ ಅಲೆಯ ಕೋವಿಡ್ ಸೋಂಕು ಪ್ರಕರಣ ಇಳಿಮುಖವಾಗುತ್ತಿದ್ದು, ಬರೋಬ್ಬರಿ ಎರಡೂವರೇ ತಿಂಗಳ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಇಂದು ಭಾರಿ ಇಳಿಕೆಯಾಗಿದೆ. ಇಂದು 985 ಜನರಲ್ಲಿ ಮಾತ್ರ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಬೆಂಗಳೂರಿಗೆ ಸದ್ಯ ಕೋವಿಡ್ ಕಂಟಕ ಕೊಂಚ ದೂರವಾದಂತಾಗಿದೆ.
ನಗರದಲ್ಲಿ ಸಾವಿನ ಪ್ರಮಾಣದಲ್ಲಿಯೂ ಇಳಿಕೆಯಾಗಿದ್ದು, ಇಂದು 16 ಮಂದಿ ಮೃತಪಟ್ಟಿದ್ದಾರೆ. ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 11,99,143 ಕ್ಕೆ ಏರಿಕೆಯಾಗಿದೆ. ಇಂದು 2818 ಮಂದಿ ಬಿಡುಗಡೆಯಾಗಿದ್ದು, 83,195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿಯೂ ಇಳಿಕೆ:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಇಳಿಕೆಯಾಗುತ್ತಿದ್ದು, ಪಾಸಿಟಿವ್ ರೇಟ್ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಮಂಗಳವಾರ 1,32,600 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಆ ಪೈಕಿ 5041 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,77,010ಕ್ಕೆ ಏರಿಕೆ ಕಂಡಿದೆ.
ಇಂದು ಪಾಸಿಟಿವಿಟಿ ದರ ಶೇ.3.80ಕ್ಕೆ ಇಳಿದಿದೆ. 14,785 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 25,81,559 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,62,282 ಇವೆ. ಕೋವಿಡ್ಗೆ 115 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 33,148 ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ ಮತ್ತೆ ಶೇ.2.28 ರಷ್ಟು ಇದೆ. ವಿಮಾನ ನಿಲ್ದಾಣದಿಂದ 167 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳ್ಳಪಟ್ಟಿದ್ದಾರೆ.