ಬೆಂಗಳೂರು: ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯವಿಧಾನವನ್ನು (SOP) ಹೇಗೆ ಪರಿಷ್ಕರಣೆ ಮಾಡಬೇಕು ಎಂದು ಕೇಳಿ ಸಚಿವ ಬಿ.ಸಿ.ನಾಗೇಶ್ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ ಬೆನ್ನಲ್ಲೆ, ಕೊರೊನಾ ಏರಿಕೆಯಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಹರಡುತ್ತಿದೆ. ಈಗಾಗಲೇ 130 ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಹೀಗಾಗಿ ಶಾಲೆಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು?, ವಸತಿ ಶಾಲೆಗಳಿಗೆ ಯಾವೆಲ್ಲ ಮಾರ್ಗಸೂಚಿ ನೀಡಬೇಕು?, ಎಸ್ಒಪಿ ಪರಿಷ್ಕರಣೆ ಹೇಗೆ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರದಲ್ಲಿ ಸಲಹೆ ಕೇಳಿದ್ದಾರೆ.
ಸಿಎಂ ಜೊತೆ ಸಭೆ
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಡಿಸೆಂಬರ್ 9ರಂದು ಸಿಎಂ ಜೊತೆ ಸಭೆ ನಡೆಸಲು ಶಿಕ್ಷಣ ಸಚಿವರು ಮುಂದಾಗಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ವೇಳೆ ಭಾಗಿಯಾಗಲಿದ್ದಾರೆ.
ಈಗಾಗಲೇ ಶೇ. 100ರಷ್ಟು ಹಾಜರಾತಿಗೆ ಅವಕಾಶ ಇರುವುದರಿಂದ ಇದನ್ನು ಶೇ.50ಕ್ಕಿಳಿಸುವ ಸಾಧ್ಯತೆ ಇದೆ. ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲು/ಒಂದಷ್ಟು ವಿದ್ಯಾರ್ಥಿಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಪಾಠಕ್ಕೆ ಒತ್ತು ನೀಡುವ ಚಿಂತನೆಯೂ ಇದೆ. ಸಾಂಕ್ರಾಮಿಕ ರೋಗದ ಕುರಿತು ಪೋಷಕರು ಆತಂಕ ವ್ಯಕ್ತಪಡಿಸಿದ ಕಾರಣದಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಯನ್ನು ಹೇಗೆ ಕಂಡುಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.