ಬೆಂಗಳೂರು: ರಾಜ್ಯದಲ್ಲಿ ಜುಲೈ ಒಂದರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೂ ಬೆಂಗಳೂರು ನಗರದಲ್ಲಿ ಕೆಲ ಪ್ಲಾಸ್ಟಿಕ್ ಮಾರಾಟ ಮಳಿಗೆಗಳು, ಉತ್ಪಾದನಾ ಘಟಕಗಳ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿವೆ. ಹೀಗಾಗಿ ಈ ಪೈಕಿ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ 98 ಪ್ರದೇಶಗಳಿಂದ ಒಟ್ಟು 154.2 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಜಪ್ತಿ ಮಾಡಿ 1,02,500 ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ನಗರದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ಬದಲು ಪುನರ್ ಬಳಕೆ ಮಾಡಬಹುದಾದ ಬಟ್ಟೆ ಬ್ಯಾಗ್, ನಾರಿನ ಬ್ಯಾಗ್, ಪೇಪರ್ನಿಂದ ತಯಾರಿಸಿದ ಕವರ್ ಬಳಸಬೇಕು. ಏಕಬಳಕೆ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಜುಲೈ 1ರಿಂದ ಜುಲೈ 13ರವರೆಗೆ 1,319 ಸ್ಥಳಗಳಲ್ಲಿ ಅನಿರೀಕ್ಷಿತ ದಾಳಿ ನಡೆಸಲಾಗಿದ್ದು, ಒಟ್ಟು 1,926.8 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಜಪ್ತಿ ಮಾಡಿ 8,36,300 ರೂ. ದಂಡವನ್ನು ವಿಧಿಸಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಬರುವ ಎಲ್ಲ ವಾರ್ಡ್ಗಳಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬಿಬಿಪಿಎಂ ಮುಂದಾಗಿದೆ. ಇದಕ್ಕಾಗಿ ಘನತ್ಯಾಜ್ಯ ವಿಭಾಗದದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್‌ಗಳ ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳ ತಂಡವು ಅನಿರೀಕ್ಷಿತವಾಗಿ ಸಗಟು ವ್ಯಾಪಾರ ಮಳಿಗೆಗಳು, ಅಂಗಡಿಗಳು, ಹೋಟೆಲ್ ಉದ್ದಿಮೆ, ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಜಪ್ತಿ ಮಾಡುವುದು ಮತ್ತು ದಂಡ ವಿಧಿಸುವ ಜೊತೆಗೆ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ