ಬೆಂಗಳೂರು: ಮೇಯರ್-ಉಪಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸದ್ಯ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಸಂಖ್ಯಾಬಲ ಸಮವಾಗಿದ್ದು, ಪಕ್ಷೇತರರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ತೀರ ಕುತೂಹಲ ಹುಟ್ಟಿಸಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೋನೇನ ಅಗ್ರಹಾರ ವಾರ್ಡ್ನ ಪಕ್ಷೇತರ ಸದಸ್ಯ ಎಂ. ಚಂದ್ರಪ್ಪ ರೆಡ್ಡಿ, ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಬೆಂಬಲ ನೀಡುವಂತೆ ಕೇಳಿಕೊಂಡರೆ ನಾವು ಬೆಂಬಲಿಸಲು ಸಿದ್ಧರಿದ್ದೇವೆ. ಬಿಜೆಪಿಗೆ ಅನರ್ಹ ಶಾಸಕರ ಬೆಂಬಲಿಗರು ಬೆಂಬಲ ನೀಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವುದರಿಂದ ನಮ್ಮನ್ನು ಯಾರು ಸಂರ್ಪಕಿಸಿಲ್ಲ. ಆಡಳಿತರೂಢ ಪಕ್ಷಕ್ಕೆ ಬೆಂಬಲ ನೀಡುವುದು ಉತ್ತಮ, ಇದರಿಂದ ಕ್ಷೇತ್ರಕ್ಕ ಅನುದಾನ ಪಡೆಯುವುದಕ್ಕೆ ಸಹಾಯವಾಗಲಿದೆ ಎಂದು ಹೇಳಿದ್ರು.
ಕಾಂಗ್ರೆಸ್ಗೆ ಬೆಂಬಲ ನೀಡುವ ಕುರಿತು ಮಾತನಾಡಿದ ಅವರು, ಕಳೆದ ಬಾರಿ ಕೆಲವು ವಿಚಾರಗಳಲ್ಲಿ ನಮಗೆ ಅನ್ಯಾಯವಾಗಿದೆ. ರಾಮಲಿಂಗರೆಡ್ಡಿ ಅವರು ಮಾತುಕತೆಗೆ ಕರೆದರೆ ಹೋಗುತ್ತೇವೆ. ನಾವು ಪಕ್ಷೇತರ ಸದಸ್ಯರೆಲ್ಲರೂ ಒಂದಾಗಿದ್ದು, ಯಾರು ನಮ್ಮ ಬೆಂಬಲ ಕೇಳುತ್ತಾರೋ ಅವರನ್ನು ಬೆಂಬಲಿಸುತ್ತೇವೆ. ಈ ಸಂಬಂಧ ಇಷ್ಟರಲ್ಲೇ ಪಕ್ಷೇತರ ಸದಸ್ಯರೆಲ್ಲ ಸಭೆ ನಡೆಸಲಿದ್ದೇವೆ. ಈ ಬಾರಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದರು.