ಬೆಂಗಳೂರು: ಹಲಸೂರು ಕೆರೆ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದರೂ ಬಿಬಿಎಂಪಿ ಕಾಳಜಿ ವಹಿಸುತ್ತಿಲ್ಲ. ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ಇದೀಗ ಎಚ್ಚೆತ್ತ ಬಿಬಿಎಂಪಿ ಕೆರೆ ಸ್ವಚ್ಛತೆಗೆ ಮುಂದಾಗಿದೆ.
ಬಿಬಿಎಂಪಿ ಸಿಬ್ಬಂದಿ, ಮಾರ್ಷಲ್‌ಗಳು ಹಾಗೂ ಎಂ.ಇ.ಜಿ (ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ಸೈನಿಕರ ಸಹಯೋಗದಲ್ಲಿ ಹಲಸೂರು ಕೆರೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕಳೆದ ಸೋಮವಾರದಿಂದ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಪಾಲಿಕೆಯ 20 ಸಿಬ್ಬಂದಿ, 30 ಮಾರ್ಷಲ್‌ಗಳು ಹಾಗೂ ಎಂ.ಇ.ಜಿ 70 ಸೈನಿಕರು, 6 ಬೋಟ್‌ಗಳ ಸಹಯೋಗದಲ್ಲಿ ಹಲಸೂರು ಕೆರೆಯಲ್ಲಿ ಬೆಳೆದಿರುವ ಕಳೆ, ಪ್ಲಾಸ್ಟಿಕ್, ಥರ್ಮಕೋಲ್ ಶೀಟ್ ಸೇರಿದಂತೆ 25 ಲೋಡ್ ತ್ಯಾಜ್ಯವನ್ನು ಈಗಾಗಲೇ ತೆರವುಗೊಳಿಸಿದ್ದಾರೆ.
ಸ್ವಚ್ಛತಾ ಅಭಿಯಾನದಡಿ ನಿನ್ನೆ ಬೆಳಗ್ಗೆ 10.45 ರಿಂದ ಎಂ.ಇ.ಜಿ. ಸೈನಿಕರು, ಮಾರ್ಷಲ್‌ಗಳ ಸಹಯೋಗದಲ್ಲಿ ಪೂರ್ವ ವಲಯದ 6 ವಿಭಾಗದ 150 ಪಾಲಿಕೆ ಸಿಬ್ಬಂದಿ, 5 ಲಾರಿ, 40 ಟ್ರ್ಯಾಕ್ಟರ್ ಹಾಗೂ ಅವಶ್ಯಕ ಸಲಕರಣೆಗಳೊಂದಿಗೆ ಸಾಮೂಹಿಕ ಸ್ವಚ್ಛತಾ ಕಾರ್ಯ ಮಾಡಿದರು. ಈ ಮೂಲಕ ಪೂರ್ತಿ ಕೆರೆಯನ್ನು ಸ್ವಚ್ಛ ಮಾಡಲು ಪಣ ತೊಡಲಾಗಿದೆ.