ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿ ಕಾರ್ಯಕರ್ತರಾಗಿರುವ ಬಿಬಿಎಂಪಿ ಹಲವಾರು ಸಿಬ್ಬಂದಿ ಅಧಿಕಾರಿಗಳಿಗೆ ಈಗಾಗಲೇ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಎರಡೆರಡು ವ್ಯಾಕ್ಸಿನ್ ಡೋಸ್ ಪಡೆದ ಬಳಿಕವೂ ಶ್ರೀರಾಂಪುರ ರೆಫರೆಲ್ ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಆತಂಕ ಮೂಡಿಸಿದೆ.
ಬಿಬಿಎಂಪಿ ಶ್ರೀರಾಂಪುರ ರೆಫರೆಲ್ ಆಸ್ಪತ್ರೆಯ ಡಾ. ಭಾರತಿ ಮಾತನಾಡಿ, ವ್ಯಾಕ್ಸಿನ್ ಎರಡು ಡೋಸೇಜ್ ಪಡೆದರೂ, ಪಿಪಿಇ ಕಿಟ್ ಹಾಕಿಯೇ ಇದ್ದು ಕೆಲಸ ಮಾಡಿದ್ರೂ ಕೋವಿಡ್ ಪಾಸಿಟಿವ್ ಬಂದಿದೆ. ನಾಲ್ಕು ದಿನವಾದರೂ ಜ್ವರ ಕಡಿಮೆಯಾಗುತ್ತಿಲ್ಲ. ಮನೆಯಲ್ಲೇ ಹೋಂ ಐಸೋಲೇಷನ್ನಲ್ಲಿ ಇದ್ದೇನೆ. ಕಳೆದ ಒಂದೂವರೇ ವರ್ಷದಿಂದ ನಿರಂತರ ಕೋವಿಡ್ ಸಮಯದಲ್ಲೂ ಡ್ಯೂಟಿ ಮಾಡುತ್ತಾ ಬಂದಿದ್ದೇನೆ ಎಂದರು.
ವೈದ್ಯ ಕುಟುಂಬಕ್ಕೆ ಕೋವಿಡ್
ಇದಲ್ಲದೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ.ರಾಜೇಶ್ವರಿ, ಡಾ. ಸ್ವಪ್ನ ಹಾಗೂ ಡಾ.ನಟರಾಜ್ ಅವರಿಗೂ ಕೋವಿಡ್ ಬಂದಿದೆ. ಇಲ್ಲಿನ ಮುಖ್ಯ ವೈದ್ಯರಾದ ಡಾ.ಫಾತಿಮಾ ನೆಗೆಟಿವ್ ಇದೆ. ಆದರೆ, ಅವರ ಪತಿ ಕೋವಿಡ್ ನಿಂದ ಕಳೆದ ವಾರ ಮೃತಪಟ್ಟಿದ್ದಾರೆ. ಮಕ್ಕಳಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಅವರೂ ಐಸೋಲೇಟ್ ಆಗಿದ್ದಾರೆ.
ಇದಲ್ಲದೆ ಡಾ. ಸಂಧ್ಯಾ ಅವರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಕೋವಿಡ್ ಪಾಸಿಟಿವ್ ಆಗಿದ್ದು, ಅಧಿಕೃತ ಅಂಕಿ-ಅಂಶ ಸದ್ಯಕ್ಕೆ ಲಭ್ಯವಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಹಗಲೂ ರಾತ್ರಿ ಕೋವಿಡ್ ವಿರುದ್ಧ ದುಡಿಯುತ್ತಿರುವ ವೈದ್ಯರ ಕುಟುಂಬಗಳಿಗೆ ಕೊರೊನಾ ಮಹಾಮಾರಿಯಾಗಿ ಕಾಡುತ್ತಿದ್ದು ಸದ್ಯ ವೈದ್ಯ ಕುಟುಂಬಗಳ ಕಾಳಜಿಗೆ ಸರ್ಕಾರ ಮುಂದಾಗಬೇಕಿದೆ.