ಬೆಂಗಳೂರು: ನಗರದ ಐದು ಪ್ರದೇಶಗಳಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ ಸೀಲ್ಡೌನ್ಗೆ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದರು. ಆದರೆ ಸಿಎಂ ಆದೇಶಕ್ಕೂ ಬೆಲೆ ನೀಡದ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೀಲ್ಡೌನ್ ಮಾಡುವಲ್ಲಿ ವಿಫಲವಾಗಿದ್ದಾರೆ.
ಇಂದು ಬೆಳಗ್ಗೆ ಕಲಾಸಿಪಾಳ್ಯ ಹಾಗೂ ಕೆ.ಆರ್. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ - ವಹಿವಾಟು ನಡೆದಿದೆ. ತಡವಾಗಿ ಎಚ್ಚೆತ್ತ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಅಧಿಕಾರಿಗಳ ತಂಡದೊಂದಿಗೆ ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ತಕ್ಷಣವೇ ಸೀಲ್ಡೌನ್ ಮಾಡುವಂತೆ ಸೂಚಿಸಿದ್ದಾರೆ. ಬ್ಯಾರಿಕೇಡ್ ಹಾಕಿ ವ್ಯಾಪಾರಸ್ಥರು, ಸಾರ್ವಜನಿಕರು ಓಡಾಡದಂತೆ ಎಚ್ಚರಿಸುವಂತೆ ತಿಳಿಸಿದ್ದಾರೆ. ಮುಂದಿನ 15 ದಿನ ನಗರದ ಈ ಪ್ರಮುಖ ಮಾರುಕಟ್ಟೆಗಳು ಬಂದ್ ಆಗಿರಲಿವೆ.
ಪರಿಶೀಲನೆ ಬಳಿಕ ಮಾತನಾಡಿದ ಮೇಯರ್, ಬೆಳಗ್ಗೆ ನಾಲ್ಕು ಗಂಟೆಗೆ ಬಂದು ಅಧಿಕಾರಿಗಳು ನೋಡಬೇಕಿತ್ತು, ಆದರೆ ತಡವಾಗಿದೆ. ಈಗ ಕಲಾಸಿಪಾಳ್ಯ ಹಾಗೂ ಕೆ.ಆರ್. ಮಾರುಕಟ್ಟೆ ಸಂಪೂರ್ಣವಾಗಿ ಸೀಲ್ಡೌನ್ ಆಗಿದೆ. ಎಲ್ಲ ಅಧಿಕಾರಿಗಳು ಬಂದಿದ್ದಾರೆ, ಪೊಲೀಸ್ ಸಿಬ್ಬಂದಿಯೂ ಜೊತೆಗಿದ್ದಾರೆ ಎಂದರು.
ಸೀಲ್ಡೌನ್ ಮಾಡಲು ಸೂಚಿಸಲಾದ ನಗರದ ಉಳಿದ ಪ್ರದೇಶಗಳಾದ ವಿವಿ ಪುರಂ, ಧರ್ಮರಾಯ ಟೆಂಪಲ್ ವಾರ್ಡ್, ವಿದ್ಯಾರಣ್ಯಪುರ, ಸಿದ್ಧಾಪುರದಲ್ಲಿ ಕೇವಲ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಆದರೆ, ಜನರ ಚಲನ - ವಲನ ನಿಯಂತ್ರಿಸಲು ಇನ್ನೂ ಸಿಬ್ಬಂದಿ ನಿಯೋಜನೆಯಾಗಿಲ್ಲ.