ಬೆಂಗಳೂರು: ಬಿಬಿಎಂಪಿ ಚುನಾವಣೆ ಅವಧಿ ಪೂರ್ಣವಾಗುವ ಮುನ್ನ ನಡೆಯುವುದು ಸಾಧ್ಯವಿಲ್ಲ. ಚುನಾವಣೆ ಮುಂದೂಡಿಕೆಯಾಗುವುದು ಪಕ್ಕಾ ಆಗಿದ್ದು, ಮತದಾರರ ಪಟ್ಟಿ ತಯಾರಿಯ ಪ್ರಕ್ರಿಯೆಗೆ ಇದೇ ತಿಂಗಳ 20 ರಂದು ಚಾಲನೆ ದೊರೆಯಲಿದೆ. ನವೆಂಬರ್ ವೇಳೆಗೆ ಈ ಪ್ರಕ್ರಿಯೆ ಪೂರ್ತಿಯಾಗಲಿದೆ.

ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಬಿಬಿಎಂಪಿ ಚುನಾವಣೆ ವಿಚಾರವಾಗಿ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಸೆಪ್ಟೆಂಬರ್ 10ಕ್ಕೆ ಬಿಬಿಎಂಪಿ ಕೌನ್ಸಿಲ್ ಅವಧಿ ಮುಕ್ತಾಯವಾಗುತ್ತದೆ. ಮುಂದಿನ ಕೌನ್ಸಿಲ್ ಆಯ್ಕೆಗೆ ಚುನಾವಣೆ ನಡೆಸಲು ಮತದಾರರ ಪಟ್ಟಿ ತಯಾರು ಮಾಡಬೇಕು. ಭಾರತ ಚುನಾವಣೆ ಆಯೋಗದ ಆದೇಶದಂತೆ ಮತದಾರರ ಪಟ್ಟಿ ತಯಾರು ಮಾಡಬೇಕು. ಮತದಾರರ ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಇದೇ 20ರಿಂದ ಚಾಲನೆಯಾಗಲಿದ್ದು, ಯಾವ ರೀತಿ ಪಟ್ಟಿ ತಯಾರು ಮಾಡ್ಬೇಕು ಎಂದು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತೆ. ಆಗಸ್ಟ್ 20 ರಿಂದ 5 ದಿನಗಳ ತರಬೇತಿ ನಂತರ ಒಂದು ತಿಂಗಳ ಕಾಲ ಮತದಾರರ ಪಟ್ಟಿ ತಯಾರಿ ನಡೆಯುತ್ತೆ. ಅಕ್ಟೋಬರ್ 8 ರಂದು ಈ ಪ್ರಕ್ರಿಯೆ ಮುಗಿಸಬೇಕು. ಅಕ್ಟೋಬರ್ 19 ರಂದು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ನವೆಂಬರ್ 30 ಕ್ಕೆ ಮತದಾರರ ಪಟ್ಟಿ ಸಂಪೂರ್ಣ ರೆಡಿಯಾಗುತ್ತೆ. ಇದಾದ ನಂತರ ಚುನಾವಣೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಬಿಬಿಎಂಪಿ ಕಾರ್ಪೊರೇಟರ್ಗಳ ಅವಧಿ ವಿಸ್ತರಣೆಗೆ ಮನವಿ ಮಾಡಿರುವ ವಿಚಾರವಾಗಿ ಮಾತನಾಡಿ, ಅದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು. ಕಾರ್ಪೊರೇಟರ್ ಮನವಿ ಮಾಡಿದ್ದಾರೆ. ಅದರನ್ವಯ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಕಾನೂನಿನಲ್ಲಿ ಅವಕಾಶ ಇದ್ರೆ ಅವಧಿ ವಿಸ್ತರಣೆ ಸರ್ಕಾರ ಮಾಡಲಿದೆ. ಇಲ್ಲದಿದ್ರೆ ಸರ್ಕಾರದಿಂದ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಿಸಲಿದೆ ಎಂದರು.