ಬೆಂಗಳೂರು: ಊಟ ಖಾಲಿಯಾಗಿದ್ದು ಹೇಗೆ?, ನಮಗ್ಯಾಕೆ ಊಟ ಇಲ್ಲ, ನಿಮ್ಮ ಗುತ್ತಿಗೆ ರದ್ದು ಮಾಡುತ್ತೇವೆ ಎಂದು ಊಟ ಖಾಲಿಯಾಗಿದ್ದಕ್ಕೆ ಕಾರ್ಪೊರೇಟರ್ಸ್ ಇಂದು ಗರಂ ಆದ ಘಟನೆ ಬಿಬಿಎಂಪಿಯಲ್ಲಿ ನಡೆಯಿತು.
ಬಿಬಿಎಂಪಿಯ ಮಾಸಿಕ ಸಭೆಯಲ್ಲಿ ಎಲ್ಲಾ ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದ್ರೆ ಇಂದು ಮಧ್ಯಾಹ್ನ ಮೂರು ಗಂಟೆಯವರೆಗೂ ಸಭೆ ನಡೆಸಿ ಬಳಿಕ ಊಟದ ವಿರಾಮ ನೀಡಲಾಯ್ತು. ಈ ವೇಳೆಗೆ ಊಟ ಖಾಲಿಯಾಗಿದ್ದಕ್ಕೆ ಪಾಲಿಕೆ ಸದಸ್ಯರು ಕೆಂಡಾಮಂಡಲರಾದ್ರು. ಕಾರ್ಪೊರೇಟರ್ ಪಲ್ಲವಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಇಂದಿರಾ ಕ್ಯಾಂಟೀನ್ ರಿವಾರ್ಡ್ಸ್ ಸಂಸ್ಥೆಯ ಗುತ್ತಿಗೆದಾರ ಬಲ್ದೇವ್ ಸಿಂಗ್, 400 ಊಟ ಹೇಳಲಾಗಿತ್ತು. ಆದರೆ ಈಗಾಗಲೇ ಅಷ್ಟು ಜನ ಊಟ ಮಾಡಿದ್ದಾರೆ. ಹೀಗಾಗಿ ಖಾಲಿಯಾಗಿದೆ ಅಂತ ತಿಳಿಸಿದ್ರು. ಇದನ್ನೊಪ್ಪದ ಪಾಲಿಕೆ ಸದಸ್ಯರು, ಈಗ ಊಟಕ್ಕೆ ನಾವು ಹೊರಗೆ ಹೋಗ್ಬೇಕಾ? ಅಂತ ಅಸಮಾಧಾನ ಹೊರ ಹಾಕಿದ್ರು.