ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪಾಯದಂಚಿನಲ್ಲಿರುವ ಕಟ್ಟಡಗಳನ್ನು ಶೀಘ್ರದಲ್ಲೇ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಟ್ಟಡ ತೆರವು ಸಂಬಂಧ ಸಮೀಕ್ಷೆ, ಗುರುತು ಮಾಡುವ ಪ್ರಕ್ರಿಯೆ ನಡೆದಿದೆ. ಶನಿವಾರ ತೆರವು ಕಾರ್ಯ ನಡೆಯಲಿದೆ ಎಂದರು.
ಬಹಳ ಹಳೆಯ ಕಟ್ಟಡ ಇರುವುದರಿಂದ ಮಾಹಿತಿ ಕೊಡಲಾಗಿದೆ. ಅದೇ ರೀತಿ, ಕಳಪೆ ಕಾಮಗಾರಿ, ಗುಣಮಟ್ಟ ತಗ್ಗಿರುವ, ದೊಡ್ಡ ಎತ್ತರದ ಕಟ್ಟಡಗಳು ಇದೆ. ಇದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ. ಮಳೆಗಾಲದ ಮುನ್ನಚ್ಚರಿಕೆ ವಿಚಾರ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ. ಅಪಾಯಕಾರಿ ಪ್ರದೇಶ, ಮರ ಸೇರಿದಂತೆ ಇನ್ನಿತರ ಮಾಹಿತಿಯ ಪಟ್ಟಿ ಸಿದ್ಧ ಮಾಡಲಾಗುತ್ತದೆ ಎಂದು ಹೇಳಿದರು.
ಅಪಾಯಕಾರಿ ಮರದ ಮಾಹಿತಿ ನೀಡಿ: ಅಪಾಯಕಾರಿ ಮರಗಳ ಮಾಹಿತಿ ಕೊಡಿ ಎಂದು ನಾಗರಿಕರಿಗೆ ಅವಕಾಶ ನೀಡಲಾಗಿದ್ದು, ಬಿಬಿಎಂಪಿ ಸಹಾಯ ಆ್ಯಪ್ ಅನ್ನೇ ಬಳಸಿಕೊಳ್ಳಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ, ನಾಗರೀಕರು ನೇರವಾಗಿ ಬಿಬಿಎಂಪಿಗೆ ದೂರುಗಳನ್ನು ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ಬಿಬಿಎಂಪಿ ಅಧಿಕಾರ ವಿಕೇಂದ್ರೀಕರಣ ಸಂಬಂಧ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲ್ಲಾ ವಲಯ ವಿಶೇಷ ಆಯುಕ್ತರಿಗೆ ವಿಶೇಷ ಅಧಿಕಾರ ನೀಡಿದರು. ನೇಮಕಾತಿಯಾಗಿರುವ ವಲಯಗಳಲ್ಲಿ ಆಗುಹೋಗು ಕುಂದು-ಕೊರತೆಗಳಿಗೆ ಸ್ಪಂದಿಸಬೇಕು. ಬೆಳಗ್ಗೆ 8 ರಿಂದಲೇ ಪ್ರದಕ್ಷಿಣೆ ಹಾಕಬೇಕು. ಬೆ. 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ವಲಯ ಕಚೇರಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಲಭ್ಯ ಇರಬೇಕು ಎಂದು ವಿಶೇಷ ಆಯುಕ್ತರಿಗೆ ಸೂಚಿಸಿದರು.
ಓದಿ: ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ:ಅಧಿಕಾರಿಗಳಿಗೆ ಸಿಎಂ ವಾರ್ನಿಂಗ್