ಬೆಂಗಳೂರು: ನಗರದಲ್ಲಿ ಕೋವಿಡ್ ವ್ಯಾಕ್ಸಿನ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಲಸಿಕೆ ವಿತರಣೆಯಲ್ಲಿ ಸರ್ಕಾರ ಎಡವಿದ್ದು, ಜನ ಆಸ್ಪತ್ರೆಗಳ ಬಳಿ ಸಾಲುಗಟ್ಟಿ ನಿಂತು ಬರಿಗೈಯಲ್ಲಿ ವಾಪಸಾಗುತ್ತಿದ್ದಾರೆ.
ವ್ಯಾಕ್ಸಿನ್ ವಿತರಣೆ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ವ್ಯಾಕ್ಸಿನ್ ವಿತರಣೆ ಈಗಲೂ ನಡೆಯುತ್ತಿದೆ. ಶೇ.50 ಕ್ಕಿಂತ ಹೆಚ್ಚು ವಯಸ್ಕರಿಗೆ ವ್ಯಾಕ್ಸಿನ್ ತಲುಪಿದೆ. ಆದರೆ ಲಸಿಕೆ ವಿತರಣೆ ಇನ್ನಷ್ಟು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ ವ್ಯಾಕ್ಸಿನ್ಗೆ ಬೇಡಿಕೆ ಹೆಚ್ಚಿದೆ, ಲಭ್ಯತೆ ಕಡಿಮೆ ಇದೆ. ಸದ್ಯಕ್ಕೆ ದಿನಕ್ಕೆ 40-50 ಸಾವಿರ ವ್ಯಾಕ್ಸಿನ್ ಡೋಸ್ ಮಾತ್ರ ಸಿಗುತ್ತಿದೆ. ಖಾಸಗಿ ಸಂಸ್ಥೆಗಳಿಗೂ 30 ಸಾವಿರ ಡೋಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್ ಕಡ್ಡಾಯ ಜೊತೆಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದು ಬರುವ ನಿರ್ಬಂಧವಿಲ್ಲ. ನಿನ್ನೆ 61 ಕಾಲೇಜುಗಳಲ್ಲಿ ಲಸಿಕೆ ವಿಶೇಷ ಕ್ಯಾಂಪ್ ಆಯೋಜಿಸಲಾಗಿತ್ತು. ನಗರದ ಕೆಲವು ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಅನ್ಲಾಕ್ನಲ್ಲಿ ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಪಾಲನೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಅಲ್ಲಿಂದ ಬರುವ ಪ್ರಯಾಣಿಕರ ತಪಾಸಣೆ ಆಗುತ್ತಿಲ್ಲ ಎಂಬ ವಿಚಾರದ ಕುರಿತು ಮಾತನಾಡಿದ ಮುಖ್ಯ ಆಯುಕ್ತರು, ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಪ್ರಯಾಣಿಕರ ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಹಾಗೂ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಪರಿಶೀಲಿಸಲು ಸೂಚಿಸಲಾಗಿದೆ. ಆದರೆ ಬೆಂಗಳೂರಿಗೆ ಇದು ಯಾವುದೇ ರೀತಿ ಅನ್ವಯವಾಗುವುದಿಲ್ಲ ಎಂದರು.
ನಗರದ ಮಹಾದೇವಪುರ ವಲಯದ ಅಪಾರ್ಟ್ಮೆಂಟ್ಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ನಗರದಲ್ಲಿ ಪ್ರತಿನಿತ್ಯ 800 ಕೇಸ್ಗಳು ದೃಢಪಡುತ್ತಿವೆ. ಅನ್ಲಾಕ್ ಕೂಗು ಕೇಳಿಬರುತ್ತಿದ್ದು, ಕೆಲವೊಂದು ಕಡಿವಾಣಗಳನ್ನೂ ಹಾಕಬೇಕಿದೆ. ಬೇರೆ ಎಲ್ಲಾ ದೇಶಗಳಲ್ಲಿ ಕಡಿವಾಣ ಇರುವ ಹಾಗೆಯೇ ನಮ್ಮ ನಗರದಲ್ಲಿಯೂ ಕೆಲವು ನಿಯಮಗಳಿವೆ ಎಂದರು.
ಇನ್ನು ಅನ್ಲಾಕ್ 3.0 ನಲ್ಲಿ ಬಾರ್, ಮಾಲ್ಗಳಿಗೆ ಅನುಮತಿ ಕೊಡುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ನಡುವೆ ಇನ್ನೂ ಕೋವಿಡ್ ವೈರಸ್ ಇದೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ವ್ಯಾಪಾರಿಗಳು, ಕಾರ್ಮಿಕರು, ಗ್ರಾಹಕರು ಎಲ್ಲರೂ ಎಚ್ಚರಿಕೆಯಿಂದ ಇದ್ದರೆ ಮಾತ್ರ ಕೋವಿಡ್ ತಡೆಗಟ್ಟಲು ಸಾಧ್ಯ. ಜನದಟ್ಟಣೆಯ ಪ್ರದೇಶಕ್ಕೆ ಅನಿವಾರ್ಯ ಇದ್ದರೆ ಮಾತ್ರ ಹೋಗಬೇಕು ಎಂದರು.