ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ, ಕೊರೊನಾದಿಂದಾಗಿ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯೂ ಹೆಚ್ಚಾಗಿದೆ. ಇದರ ವಿಲೇವಾರಿಗೆ ಪಾಲಿಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 40 ಟನ್ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಇದೀಗ ಕಳೆದ 20 ದಿನಗಳಿಂದ ಕೊರೊನಾ ತ್ಯಾಜ್ಯ ಹೆಚ್ಚುತ್ತಿರುವುದು ಕಂಡುಬಂದಿದ್ದ, ಈಗ ಪ್ರತಿದಿನ 4೦ ಟನ್ ವೈದ್ಯಕೀಯ ತ್ಯಾಜ್ಯವಲ್ಲದೇ ಹೆಚ್ಚುವರಿಯಾಗಿ 25 ಟನ್ ಕೊರೊನಾ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು ಹೊರವಲಯದ ತಾವರೆಕೆರೆ ಬಳಿ ಸ್ಮಶಾನಕ್ಕೆ ಜಾಗ.. 20 ಕ್ಕೂ ಹೆಚ್ಚು ಶವಗಳ ದಹನಕ್ಕೆ ಅವಕಾಶ
ಚಿತಾಗಾರದ ಬಳಿ ಪಿಪಿಇ ಕಿಟ್, ಮಾಸ್ಕ್ ಹಾಗೂ ವೈದ್ಯಕೀಯ ತ್ಯಾಜ್ಯ ರಸ್ತೆ ಬದಿ, ಪಾದಚಾರಿ ಮಾರ್ಗ, ಕಾಲುವೆಗಳಲ್ಲಿ, ಆಸ್ಪತ್ರೆಗಳ ಮುಂಭಾಗಗಳಲ್ಲಿ, ಕಸದ ತೊಟ್ಟಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಇದರಿಂದಾಗಿಯೂ ಕೂಡ ಕೊರೊನಾ ಸೋಂಕು ಹಬ್ಬುವ ಆತಂಕವೂ ಹೆಚ್ಚಾಗಿದೆ ಎಂದು ಹೇಳಿದರು.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸರಿ ಸುಮಾರು 20-25 ಟನ್ ತ್ಯಾಜ್ಯ ಹೆಚ್ಚಾಗುತ್ತಿದ್ದು, ಸ್ಯಾನಿಟರಿ ತ್ಯಾಜ್ಯದೊಂದಿಗೆ ಬರುತ್ತಿದೆ. ಹೀಗಾಗಿ, ಕೋವಿಡ್ ಆರೈಕೆ ಕೇಂದ್ರ ಹಾಗೂ ವಿವಿಧೆಡೆ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರುವ ಕಂಪನಿಗಳು ಹೊಸ ಟೆಂಡರ್‌ನಲ್ಲಿ ಭಾಗವಹಿಸಲಿವೆ.
ಒಂದು ಕೆ.ಜಿ.ತ್ಯಾಜ್ಯ ವಿಲೇವಾರಿಗೆ 18 ರೂ. ಗಳನ್ನು ಬಿಬಿಎಂಪಿ ನಿಗದಿಪಡಿಸಿದೆ. ಆದರೆ, ಗುತ್ತಿಗೆದಾರರು ಸಾರಿಗೆ ವ್ಯವಸ್ಥೆ ಸೇರಿದಂತೆ ಪ್ರತಿ ಕೆ.ಜಿಗೆ 58 ರೂ. ಕೇಳುತ್ತಿದ್ದು, ಕಳೆದ ಬಾರಿಯೂ ಇದೇ ದರ ನಿಗದಿ ಆಗಿತ್ತು. ಯಾರು ಕಡಿಮೆ ದರಕ್ಕೆ ಬಿಡ್ ಮಾಡುತ್ತಾರೋ ಅವರಿಗೆ ಟೆಂಡರ್ ನೀಡಿ, ಕೊರೊನಾ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು ಎಂದು ಹೇಳಿದರು.