ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುವ, ಆಟಿಕೆ ಸಾಮಾನುಗಳನ್ನು ಮಾರುವ ಮಕ್ಕಳು ಹಾಗೂ ಸ್ಲಂಗಳಲ್ಲಿ ವಾಸಿಸುವ ಮಕ್ಕಳನ್ನು ಗುರುತಿಸಿ ಸರ್ವೇ ಮಾಡುವ ಕುರಿತು ಆಯುಕ್ತ ಮಂಜುನಾಥ್ ಪ್ರಸಾದ್ ಅಧಿಕಾರಿಗಳ ಸಭೆ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಭಿಕ್ಷೆ ಬೇಡುವ ಅಥವಾ ಟ್ರಾಫಿಕ್ ಸಿಗ್ನಲ್‌ಗಳ ಬಳಿ ಆಟಿಕೆ/ ಇತರೆ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳು ಹಾಗೂ ಸ್ಲಂಗಳಲ್ಲಿ ವಾಸಿಸುವ ಮಕ್ಕಳ ನಿಖರ ಮಾಹಿತಿಯನ್ನು ತ್ವರಿತಗತಿಯಲ್ಲಿ ಸರ್ವೇ ಮಾಡಿ ಪಟ್ಟಿ ಸಿದ್ಧಪಡಿಸಬೇಕು. ಈ ಸಂಬಂಧ ಎಲ್ಲಾ ವಲಯ ಜಂಟಿ ಆಯುಕ್ತರು ಹಾಗೂ ಆಯಾ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ರಾತ್ರಿ 8ರಿಂದ ಮಧ್ಯರಾತ್ರಿ 12ರವರೆಗೆ ತಪಾಸಣೆ ನಡೆಸಿ ರಸ್ತೆ/ಪಾದಚಾರಿ ಮಾರ್ಗ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ/ತಂಗುದಾಣ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಸೂರು(ಮನೆ) ಇಲ್ಲದೆ ಮಲಗಿರುವವರನ್ನು ಗುರುತಿಸಿ ಪಟ್ಟಿ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳು ದಿನನಿತ್ಯದ ಕೆಲಸಗಳ ಜೊತೆಗೆ ಭಿಕ್ಷೆ ಬೇಡುವ ಮಕ್ಕಳು, ಸ್ಲಂಗಳಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ಇರುವಂತಹ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೆಕು. ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಸ್ಲಂಗಳಿವೆಯೋ ಅಷ್ಟೂ ಸ್ಲಂಗಳಲ್ಲಿ ಎಷ್ಟು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಎಷ್ಟು ಮಕ್ಕಳು ಮನೆಯಲ್ಲೇ ಇದ್ದಾರೆ ಎಂಬ ನಿಖರ ಮಾಹಿತಿ ಸಂಗ್ರಹಿಸಿ, ಸ್ಲಂಗಳಿಗೆ ಶಿಕ್ಷಕರನ್ನು ಕಳುಹಿಸಿ ಅವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಮನೆಗಳಿಲ್ಲದ ಮಕ್ಕಳು/ವಯಸ್ಕರು ಎಲ್ಲಿಂದ ಬಂದಿದ್ದಾರೆ, ಯಾವ ಕಾರಣಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ಇಲ್ಲಿಯವರು ಹಾಗೂ ಹೊರ ರಾಜ್ಯದಿಂದ ಬಂದವರೆಷ್ಟು ಸೇರಿದಂತೆ ಇನ್ನಿತರೆ ಸಮರ್ಪಕ ಮಾಹಿತಿಯನ್ನು ಫೋಟೋ ಸಹಿತ ಸಮೀಕ್ಷೆ ನಡೆಸಿ ವರದಿ ಮಾಡಬೇಕು. ಜೊತೆಗೆ ರಾತ್ರಿ ವೇಳೆ ಆಶ್ರಯ ಕಲ್ಪಿಸಲು ಇರುವ ಪಾಲಿಕೆಯ ರಾತ್ರಿ ತಂಗುದಾಣಗಳಲ್ಲಿ ಮಲಗಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.