ಬೆಂಗಳೂರು : ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿ ಆಗೋದು ಬಹುತೇಕ ಖಚಿತ. ಸಿಎಂ ರೇಸ್‌ನ ಮುಂಚೂಣಿಯಲ್ಲಿದ್ದ ಬಸವರಾಜ ಸೋಮಪ್ಪ ಬೊಮ್ಮಾಯಿ ಲಿಂಗಾಯತ ಸಮುದಾಯದವರು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.
ಬಿ ಎಲ್ ಸಂತೋಷ್ ಜೊತೆಗಿನ ಓಡನಾಟ ಹಾಗೂ ಅವರ ಆಶಯಕ್ಕೆ ತಕ್ಕಂತೆ ಗೃಹ ಇಲಾಖೆಯನ್ನೂ ನಿರ್ವಹಿಸಿದ್ದಾರೆ ಎಂಬುದೂ ಆಯ್ಕೆಗೆ ವರದಾನವಾಗಿದೆ. ಅಲ್ಲದೆ ಪಕ್ಷ ಹಾಗೂ ಸಂಘಟನೆಯವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
ಬೊಮ್ಮಾಯಿಯವರು ಜನತಾ ಪರಿವಾರದಿಂದ ಬಂದವರು. ಸಾದರ ಲಿಂಗಾಯತ ಸಮುದಾಯದವರೇ ಆಗಿರುವುದರಿಂದ ಬಿ ಎಸ್ ಬೊಮ್ಮಾಯಿ ಆಯ್ಕೆಗೆ ಪ್ರಮುಖ ಕಾರಣ ಎನ್ನಲಾಗ್ತಿದೆ.
ಬಸವರಾಜ್ ಬೊಮ್ಮಾಯಿ ಇತಿಹಾಸ
- ಹುಟ್ಟು- 28 ಜನವರಿ 1960 (61 ವರ್ಷ)ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು.
- ಮಡದಿ- ಚೆನ್ನಮ್ಮ ಬಿ. ಬೊಮ್ಮಾಯಿ
- ತಂದೆ- ಎಸ್.ಆರ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
- ತಾಯಿ- ಗಂಗಮ್ಮ ಎಸ್. ಬೊಮ್ಮಾಯಿ
- ಮಕ್ಕಳು- ಒಂದು ಗಂಡು, ಒಂದು ಹೆಣ್ಣು.
- ಶಿಕ್ಷಣ- ಬಿ.ಇ.ಮೆಕ್ಯಾನಿಕಲ್
ರಾಜಕೀಯ ಹಿನ್ನೆಲೆ
- ಕಾಲೇಜ್ ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಹಾಗೂ ರಾಜಕೀಯ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ಕಿ ಹೊಂದಿದ್ದ ಬಸವರಾಜ ಬೊಮ್ಮಾಯಿಯವರು ತಮ್ಮ ರಾಜಕೀಯ ಜೀವನವನ್ನು ಜನತಾದಳದೊಂದಿಗೆ ಪ್ರಾರಂಭಿಸಿದರು.
- 1995ರಲ್ಲಿ ರಾಜ್ಯ ಜನತಾದಳ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
- 1995ರಲ್ಲಿ ಹುಬ್ಬಳ್ಳಿ ನಗರದ ಈದ್ಗಾ ಮೈದಾನದ ಸಮಸ್ಯೆಗೆ ಶಾಸ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ ಮಾಡಿದ್ದರು.
- 1996 ರಿಂದ 1997ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ ಹೆಚ್ ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು.
- 1998-2008 - ವಿಧಾನ ಪರಿಷತ್ ಸದಸ್ಯರಾಗಿ ಧಾರವಾಡ ಸ್ಥಳೀಯ ಕ್ಷೇತ್ರದಿಂದ ಎರಡು ಬಾರಿ ಆಯ್ಕೆ. (1998 ಹಾಗೂ 2004)
- 2007 ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 232 ಕಿ.ಮೀ. 21 ದಿನಗಳ ಕಾಲ ರೈತರೊಂದಿಗೆ ಪಾದಯಾತ್ರೆ ಮಾಡಿದ್ದರು.
- 2008- ಬಿಜೆಪಿ ಪಕ್ಷ ಸೇರ್ಪಡೆ
- 2008- ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಿಂದ ಸ್ಪರ್ಧೆ, ವಿಧಾನಸಭೆಗೆ ಶಾಸಕರಾಗಿ ಆಯ್ಕೆ.
- 7 ಜೂನ್ 2008- 13 ಮೇ 2013 ಜಲಸಂಪನ್ಮೂಲ ಸಚಿವರಾಗಿದ್ದರು.
- 27 ಸೆಪ್ಟೆಂಬರ್ 2019 - 6 ಫೆಬ್ರವರಿ 2020 ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು.
- 21 ಜನವರಿ 2021 - 26 ಜುಲೈ 2021 ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ
- 26 ಆಗಷ್ಟ್ 2019 - 26 ಜುಲೈ 2021 ರಾಜ್ಯ ಸರ್ಕಾರದ ಗೃಹ ಸಚಿವರಾಗಿ ಕೆಲಸ ಮಾಡಿದ್ದು, ನಿನ್ನೆ ಸಿಎಂ ರಾಜೀನಾಮೆ ಬಳಿಕ ಸಚಿವ ಸಂಪುಟವೂ ಬರ್ಖಾಸ್ತುಗೊಂಡಿದೆ.
ಇದರ ಜೊತೆಗೆ ಹಾವೇರಿ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಇದ್ದರು. ವೃತ್ತಿಯಲ್ಲಿ ಕೃಷಿಕರಾಗಿಯೂ, ಉದ್ಯಮಿಯಾಗಿಯೂ, ನೀರಾವರಿ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದವರಾಗಿದ್ದು, ದೇಶದಲ್ಲೇ ಪ್ರಥಮಬಾರಿಗೆ ಶಿಗ್ಗಾಂವ್ನಲ್ಲಿ 100% ಪೈಪ್ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದವರು.