ಬೆಂಗಳೂರು: ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ಮುಹೂರ್ತ ನಾಳೆಗೆ ಮುಂದೂಡಿಕೆಯಾಗಿದೆ. ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರ ವಿಳಂಬವಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಇಂದು ಸಂಜೆ 5ಗಂಟೆಗೆ ಇದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗುವ ಕಾರ್ಯಕ್ರಮ ನಿಗದಿಯಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೊರಟ್ಟಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಪಕ್ಷದ ಕಚೇರಿಯಲ್ಲಿಯೇ ಇಡೀ ದಿನ ಉಪಸ್ಥಿತರಿದ್ದರು. ಆದರೆ ಹೊರಟ್ಟಿ ಅವರ ರಾಜೀನಾಮೆ ಅಂಗೀಕಾರ ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದರಿಂದ ನಾಳೆಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಯಿತು.
ಹಂಗಾಮಿ ಸಭಾಪತಿಯಾಗಿ ರಘುನಾಥ ರಾವ್ ಮಲ್ಕಾಪುರೆ ನೇಮಕವಾಗಿ ಬಸವರಾಜ ಹೊರಟ್ಟಿ ಅವರಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮತ್ತೊಮ್ಮೆ ರಾಜೀನಾಮೆ ಪತ್ರ ಸ್ವೀಕರಿಸಿ ಪರಿಶೀಲಿಸಿ ರಾಜೀನಾಮೆ ಅಂಗೀಕಾರ ಮಾಡಿದರು. ಆದರೆ ಅಷ್ಟರ ವೇಳೆಗೆ ಸಂಜೆಯಾಗಿದ್ದರಿಂದ ತರಾತುರಿಯಲ್ಲಿ ಪಕ್ಷ ಸೇರ್ಪಡೆ ನಡೆಸುವುದು ಬೇಡ ಎನ್ನುವ ನಿರ್ಧಾರದೊಂದಿಗೆ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿಕೆ ಮಾಡಲಾಯಿತು.
ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳ ಸಮಯಾವಕಾಶ ನೋಡಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸರ್ಕಾರ ಹೇಳಿಕೆ: ಖಾದರ್ ಹೇಳಿಕೆಗೆ ಸುನೀಲ್ ಕುಮಾರ್ ತಿರುಗೇಟು