ಬೆಂಗಳೂರು: ರಾಜ್ಯದಲ್ಲಿ ಕಳೆದೆರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದ್ದು, ಪ್ರಾಥಮಿಕ ಸಮೀಕ್ಷೆ ನಡೆಸಿ ತಕ್ಷಣವೇ ಬೆಳೆ ಹಾನಿಗೆ ಪರಿಹಾರ ವಿತರಣೆ ಮಾಡುವ ಕುರಿತು ಆದೇಶ ಹೊರಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ತಿಳಿಸಿದರು.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವ್ಯಾಪಕವಾಗಿ ಅಕಾಲಿಕ ಮಳೆಯಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಿದೆ. ವಿಶೇಷವಾಗಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಅಂಚಿನ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಈಗಾಗಲೇ ಕೇಳಿದ್ದೇನೆ. ವಿಶೇಷವಾಗಿ ಈ ಬಾರಿ ಹೆಚ್ಚು ಬೆಳೆ ಹಾನಿಯಾಗಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳು ವ್ಯಾಪಕ ಮಳೆಯಿಂದ ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿದೆ. ನಿಖರವಾದ ಮಾಹಿತಿಯನ್ನ ಪ್ರತಿಯೊಂದು ಜಿಲ್ಲೆಯಿಂದ ನಾನು ಪಡೆದುಕೊಳ್ಳುತ್ತಿದ್ದೇನೆ. ಪ್ರಾಥಮಿಕ ಸಮೀಕ್ಷೆ ಆದ ತಕ್ಷಣವೇ ಪರಿಹಾರ ಕೊಡುವ ನಿಟ್ಟಿನಲ್ಲಿ ಆದೇಶ ಹೊರಡಿಸುತ್ತೇವೆ ಎಂದರು.
ಇನ್ನು ಬೆಳೆ ಹಾನಿಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಅವಕಾಶವಿರುವಷ್ಟು ಪ್ರಮಾಣದಲ್ಲಿ ಪರಿಹಾರ ಘೋಷಣೆ ಮಾಡಲಾಗುತ್ತದೆ. ಹೆಚ್ಚಿನ ನೆರವಿಗಾಗಿ ಕೇಂದ್ರಕ್ಕೆ ಪತ್ರ ಬರೆಲಾಗುವುದು. ಮೊದಲು ಸಮೀಕ್ಷಾ ವರದಿ ಬಂದು, ನಷ್ಟದ ಅಂದಾಜು ಲಭ್ಯವಾದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ: ಇಂದು ಜಿಲ್ಲಾಡಳಿತಗಳ ಜೊತೆ ಸಿಎಂ ಸಭೆ