ಬೆಂಗಳೂರು: ಕೋವಿಡ್ನ ಭೀಕರ ದಿನಗಳಲ್ಲಿ ನಗರಕ್ಕೆ ಒಂದು ದಿನವೂ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಸವಾಲಾಗಿ ಸ್ವೀಕರಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಕೆಲಸ ನಿರ್ವಹಿಸಿದೆ. ಆದರೆ, ಇಂತಹ ಸಂದರ್ಭದಲ್ಲಿ ಜಲಂಮಡಳಿಯ ಆರು ಮಂದಿ ಸಿಬ್ಬಂದಿ ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಜಲಮಂಡಳಿಯ ಪ್ರಧಾನ ಅಭಿಯಂತರರಾದ ಡಾ.ಬಿ.ಎಮ್.ಸೋಮಶೇಖರ್ ತಿಳಿಸಿದರು.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಜಲಮಂಡಳಿಯ ಪ್ರಧಾನ ಅಭಿಯಂತರರಾದ ಡಾ.ಬಿ.ಎಮ್.ಸೋಮಶೇಖರ್, ಕೋವಿಡ್ ಎರಡನೇ ಅಲೆ ಬಹಳ ಸವಾಲಾಗಿತ್ತು. ಬಿಡಬ್ಲ್ಯೂಎಸ್ಎಸ್ಬಿ ದಿನದ ಎಲ್ಲಾ ಸಮಯದಲ್ಲಿ ಕೆಲಸ ಮಾಡುತ್ತದೆ. ವಾಲ್ ಆಪರೇಟರ್, ಲೀಕೇಜ್ ಬಂದ್ರೆ ಸರಿಪಡಿಸಲು ಸ್ಥಳಕ್ಕೆ ಹೋಗ್ಬೇಕು, ಅಲ್ಲದೇ ಜಲಮಂಡಳಿ ಇಂಜಿನಿಯರ್ಸ್ ಬಿಬಿಎಂಪಿ ಜೊತೆ ಕೈಜೋಡಿಸಿ ಕೋವಿಡ್ ವಾರಿಯರ್ ಆಗಿಯೂ ಕೆಲಸ ಮಾಡಿದ್ದಾರೆ.
ಯಾವ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇವೆ ಎಂಬ ಪರಿಶೀಲನೆಗೂ ತೆರಳಿ ಕೋವಿಡ್ ಡ್ಯೂಟಿ ಮಾಡಿದ್ದಾರೆ. ಹೀಗಾಗಿ ಜಲಮಂಡಳಿ ಪ್ರಧಾನ ಅಭಿಯಂತರರಾದ ನನ್ನನ್ನೂ ಸೇರಿಸಿದಂತೆ ಹಲವಾರು ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ ಆರು ಮಂದಿ ಸಹೋದ್ಯೋಗಿಗಳನ್ನು ಕೋವಿಡ್ ನಿಂದ ಕಳೆದುಕೊಂಡಿದ್ದೇವೆ. ಆದರೂ ಯಾವುದೇ ಸಂದರ್ಭದಲ್ಲಿ ನಗರದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.
ಹಿರಿಯ ಕಾರ್ಯನಿರ್ವಾಹಕ ಅಭಿಯಂತರ ರುದ್ರಮುನಿ, ವಾಟರ್ ಇನ್ಸ್ಪೆಕ್ಟರ್ ಹನುಮಂತರಾಜು, ಮೀಟರ್ ರೀಡರ್ ಗೋವರ್ಧನ್ ಹಾಗೂ ಹನುಮಂತಯ್ಯ, ಸೆಕ್ಯೂರಿಟಿ ಹಾಗೂ ಚಾಲಕ ಪಿಂಟೋ ಕೂಡಾ ಮೃತಪಟ್ಟಿದ್ದಾರೆ. ಜಲಮಂಡಳಿ ಅಧಿಕಾರಿ, ನೌಕರರನ್ನೂ ಕೊರೊನಾ ವಾರಿಯರ್ಗಳಾಗಿ ಪರಿಗಣಿಸಿ, ಪರಿಹಾರ ಧನ ಕೊಡುವಂತೆ ಈಗಾಗಲೇ ಜಲಮಂಡಳಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಜಲಂಮಡಳಿಯಲ್ಲಿ ಒಟ್ಟು 4255 ಸಿಬ್ಬಂದಿ, ಅಧಿಕಾರಿಗಳಿದ್ದು ಈ ಪೈಕಿ 1795 ಮಂದಿ ಖಾಯಂ ಹಾಗೂ 2460 ಮಂದಿ ಹೊರಗುತ್ತಿಗೆ ನೌಕರರಿದ್ದಾರೆ. ಬಹುತೇಕ ಮಂದಿಗೆ ಹಾಗೂ ಅವರ ಕುಟುಂಬಸ್ಥರಿಗೂ ಕೊರೊನಾ ಹರಡಿದೆ ಎಂದು ಮಾಹಿತಿ ನೀಡಿದರು.