ಬೆಂಗಳೂರು: ರಾಜಧಾನಿ ಬೆಂಗಳೂರಿನ ಸುಗಮ ಸಂಚಾರ ಉದ್ದೇಶದಿಂದ ಪ್ರಾರಂಭವಾದ ವೈಟ್ ಟಾಪಿಂಗ್ ಕಾಮಗಾರಿ ಅಂತೂ ಇಂತೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಒಂದು ತಿಂಗಳಲ್ಲಿ ರಾಜಧಾನಿಯ ವೈಟ್ ಟಾಪಿಂಗ್ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ನಗರದ ಹೃದಯಭಾಗ, ವಾಣಿಜ್ಯ ಪ್ರದೇಶ, ಸಂಚಾರ ಒತ್ತಡದ ಮಾರ್ಗಗಳಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಮುಂದಿನ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 90 ಕಿ.ಮೀ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿದೆ. ಇದರಿಂದಾಗಿ ಎರಡು ವರ್ಷಗಳಿಂದ ಕಾಮಗಾರಿ ಕಿರಿಕಿರಿಯಿಂದ ತೊಂದರೆಗೊಳಗಾಗಿದ್ದ ವಾಹನ ಸವಾರರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಲಿದೆ ಎಂದು ಹೇಳಿದ್ದಾರೆ.
80 ಶೇಕಡಾ ಕಾಮಗಾರಿ ಮುಗಿದಿದೆ: ಈಗಾಗಲೇ ನಗರಾದ್ಯಂತ ಪ್ರಮುಖ ರಸ್ತೆಗಳಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಶೇ.80 ರಷ್ಟು ಪೂರೈಸಲಾಗಿದೆ. ಒಟ್ಟಾರೆ, 90 ಕಿ.ಮೀ. ಉದ್ದದರಸ್ತೆಯಲ್ಲಿ 81 ಕಿ.ಮೀ ಉದ್ದದ ರಸ್ತೆಗಳ ಕಾಮಗಾರಿ ಸಂಪೂರ್ಣಗೊಂಡಿದೆ. ಗಾಂಧಿ ಬಜಾರ್ , ಕನಕನಪಾಳ್ಯ, ಮೈಸೂರು ರಸ್ತೆಯಿಂದ-ವಿಶ್ವವಿದ್ಯಾಲಯ ಒಳಗಡೆ ಪ್ರವೇಶ ಗುಡ್ ಶೆಡ್ ರೋಡ್, ಮಿಷನ್ ರೋಡ್ನಲ್ಲಿ ಕಾಮಗಾರಿ ಆರಂಭವಾಗಬೇಕಿದೆ ಎಂದು ತಿಳಿಸಿದ್ದಾರೆ.
ವೈಟ್‌ಟಾಪಿಂಗ್ ಕಾಮಗಾರಿಯಿಂದಾಗಿ ಮುಂದಿನ 20 - 30 ವರ್ಷಗಳ ಕಾಲ ರಸ್ತೆಗಳು ಯಾವುದೇ ಸಮಸ್ಯೆ ಇಲ್ಲದೇ ನಿರ್ವಹಣೆಯಾಗಲಿದ್ದು, ಪದೇ ಪದೆ ಅಥವಾ ಪ್ರತಿ ವರ್ಷ ಕಾಮಗಾರಿ, ದುರಸ್ತಿಯ ಪ್ರಮೇಯವೇ ಇರುವುದಿಲ್ಲ ಎಂದಿದ್ದಾರೆ.
ಲಾಕ್ಡೌನ್ನಿಂದಾಗಿ ಕಾಮಗಾರಿಗೆ ಅಡ್ಡಿ: 2018 ರಲ್ಲಿ ವೈಟ್‌ಟಾಪಿಂಗ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಕೊರೊನಾ ಲಾಕ್‌ಡೌನ್, ಕಾರ್ಮಿಕರ ಅಭಾವದಿಂದಾಗಿ ಒಂದಷ್ಟು ದಿನ ಕಾಮಗಾರಿಗೆ ಅಡ್ಡಿಯಾಗಿತ್ತು. ಮುಖ್ಯಮಂತ್ರಿಯವರ ನಗರೋತ್ಥಾನದಡಿ ಲಭ್ಯವಿದ್ದ ಅನುದಾನವನ್ನೂ ವೈಟ್ ಟಾಪಿಂಗ್ ಯೋಜನೆಗೆ ಬಳಸಲಾಗಿದ್ದು, ಇತ್ತೀಚಿಗೆ ಕಾಮಗಾರಿ ಚುರುಕುಗೊಂಡಿದೆ. ಹೀಗಾಗಿ, 2022ರ ಆಗಸ್ಟ್ ಅಂತ್ಯಕ್ಕೆ ಮುಕ್ತಾಯವಾಗುವ ಸಂಭವ ಇದೆ ಎಂದು ಪಿ.ಎನ್.ರವೀಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಡಿಕೆಶಿ