ಬೆಂಗಳೂರು: ನಗರಕ್ಕೆ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಇಂದು ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ರಸ್ತೆಗಳಲ್ಲಿ ನಿತ್ಯ ಓಡಾಡುವವರು ಮಾರ್ಗ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು.
ಪರ್ಯಾಯ ಮಾರ್ಗ ಎಲ್ಲೆಲ್ಲಿ ಅಂತ ನೋಡುವುದಾದರೆ: ಬೆಳಗ್ಗೆ 11 ರಿಂದ 1 ಗಂಟೆಯ ವರೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಬದಲಾಗಲಿದೆ. ನಗರಕ್ಕೆ ಎಂಟ್ರಿ ಕೊಡುವವರು ಕಾವೇರಿ ಜಂಕ್ಷನ್ - ಮೇಖ್ರಿ ಸರ್ಕಲ್ -ಹೆಬ್ಬಾಳ ಫ್ಲೈ ಓವರ್ ಬಳಸದೇ ಬೇರೆ ಮಾರ್ಗವಾಗಿ ಸಾಗಬೇಕು. ತುಮಕೂರು ರಸ್ತೆ-ಕೆಆರ್ ಪುರ, ಯಶವಂತಪುರ - ಯಲಹಂಕ-ದೇವನಹಳ್ಳಿ ಕಡೆ ಸಾಗುವವರು ರೂಟ್ ಚೇಂಜ್ ಮಾಡಬೇಕಾಗುತ್ತೆ.
ಎಲ್ಲೆಲ್ಲಿ ಸಂಚಾರ ನಿಷೇಧ : ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ ಮತ್ತು ಮೈಸೂರು ರಸ್ತೆಗೆ ಸಂಚಾರ ನಿಷೇಧಿಸಲಾಗಿದೆ. ಬೆಳಗ್ಗೆ 9 ರಿಂದ 6 ಗಂಟೆಯವರೆಗೆ ಮೈಸೂರು - ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ 3:30 ರವರೆಗೆ ಕೊಮ್ಮಘಟ್ಟ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಖಾಕಿ ಕಣ್ಗಾವಲು: ಮೋದಿ ವಿಮಾನ ನಿಲ್ದಾಣಕ್ಕೆ ಬಂದಾಗಿನಿಂದ ಸಂಜೆ ಬೆಂಗಳೂರು ನಿರ್ಗಮಿಸುವ ವರೆಗೂ ಸುಮಾರು 10 ಸಾವಿರ ಮಂದಿ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಭಾಗಿಯಾಗಲಿದ್ದಾರೆ. ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಸೇರಿದಂತೆ 12 ಡಿಸಿಪಿಗಳು, 30 ಮಂದಿ ಎಸಿಪಿಗಳು, 80 ಇನ್ಸ್ ಪೆಕ್ಟರ್ ಹಾಗೂ ಕೆಎಸ್ ಆರ್ ಪಿ, ಸಿಎಆರ್ ಪಡೆ, ಗರುಡ ಪಡೆಗಳನ್ನ ಭದ್ರತೆಗೆ ನಿಯೋಜಿಸಲಾಗಿದೆ.
11:15 ಕ್ಕೆ ಯಲಹಂಕ ವಾಯುನೆಲೆಗೆ ಬಂದಿಳಿಯಲಿರುವ ಮೋದಿ ಮಲ್ಲೇಶ್ವರ ಬಳಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ಮೊದಲು ಭೇಟಿ ನೀಡಲಿದ್ದಾರೆ. ನಂತರ ಜ್ಞಾನ ಭಾರತಿ ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ ಉದ್ಘಾಟನೆ ಬಳಿಕ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ಇಂದು ಬೆಂಗಳೂರಿಗೆ ಮೋದಿ... ಕಾರ್ಯಕ್ರಮಗಳ ಡಿಟೇಲ್ಸ್... ಶಿಕ್ಷಣ ಸಂಸ್ಥೆಗಳಿಗೆ ರಜೆ